ವಿಜಯನಗರ, ಜು 21 (DaijiworldNews/DB): ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ ಕಾರಣ ಪಾಗಲ್ ಪ್ರೇಮಿಯೊಬ್ಬ ಆಕೆಯ ರುಂಡ ಕಡಿದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಘಟನೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಕನ್ನಬೋರಯ್ಯನಬಹಟ್ಟಿಯಲ್ಲಿ ನಡೆದಿದೆ.
ನಿರ್ಮಲಾ (23) ಕೊಲೆಯಾದ ಯುವತಿ. ಭೋಜರಾಜ ಎಂಬಾತ ಕೃತ್ಯ ಎಸಗಿದ್ದಾನೆ. ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ನಿರ್ಮಲಾಳನ್ನು ಪ್ರೀತಿಸುತ್ತಿದ್ದ ಭೋಜರಾಜ ಆಕೆಯನ್ನು ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರಲ್ಲಿ ಕೇಳಿದ್ದ. ಆದರೆ ಪೋಷಕರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದಷ್ಟೇ ಭೋಜರಾಜ ಬೇರೆ ಹುಡುಗಿಯನ್ನು ವರಿಸಿದ್ದ.ಆದರೆ ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ.
ಬೇರೆ ಊರಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ನಿರ್ಮಲಾ ಪರೀಕ್ಷೆ ಗೆ ಓದಲು ಊರಿಗೆ ಬಂದ ವೇಳೆ ಸಮಯ ಸಾಧಿಸಿದ ಆತ ಮಚ್ಚಿನಿಂದ ಆಕೆಯ ರುಂಡ ಕತ್ತರಿಸಿ ರುಂಡದೊಂದಿಗೆ ಖಾನಾಹೊಸಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ವರದಿಯಾಗಿದೆ.