ಬೆಂಗಳೂರು, ಜು 21 (DaijiworldNews/DB): ಗಾಂಧಿ ಕುಟುಂಬದ ಹೆಸರಲ್ಲಿ 3-4 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ. ಇನ್ನು ಅವರ ಋಣ ತೀರಿಸುವುದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಇಡಿ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ರಾಜಭವನ ಚಲೋ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾವು ಈ ಮಟ್ಟಕ್ಕೆ ಬೆಳೆದಿರುವುದು, ಇಷ್ಟೆಲ್ಲಾ ಮಾಡಿಕೊಂಡಿರುವುದು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದಿಂದ. ನೆಹರೂ, ಇಂದಿರಾ, ಸೋನಿಯಾ ಹೆಸರಿನಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ಅವರ ಋಣ ತೀರಿಸುವ ಕಾಲ ಬಂದಿದ್ದು, ಆ ಕೆಲಸ ಮಾಡದಿದ್ದರೆ ನಮ್ಮ ಅನ್ನಕ್ಕೆ ಹುಳ ಬೀಳಬಹುದು ಎಂದರು.
ಕಾಂಗ್ರೆಸ್ ಉಳಿದರೆ ಮಾತ್ರ ದೇಶ ಉಳಿದೀತು. ನಾವು ತಿನ್ನುವ ಊಟ ಸಾರ್ಥಕವಾಗಬೇಕಾದರೆ ಸೋನಿಯಾ ಗಾಂಧಿಯವರಿಗೆ ನೈತಿಕವಾಗಿ ಸಮಾಧಾನ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕಾನೂನಿಗಿಂತ ಸೋನಿಯಾ ದೊಡ್ಡವರಾ ಎಂದು ಪ್ರಶ್ನಿಸುವ ಬಿಜೆಪಿಯವರ ಪೂರ್ವಿಕರು, ಆರೆಸ್ಸೆಸ್ ನವರು, ಹಿಂದೂ ಮಹಾಸಭಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿನಲ್ಲಿ ಕಳೆದಿದ್ದರಾ ಎಂದು ಪ್ರಶ್ನಿಸಿದರು.