ಬೆಂಗಳೂರು, ಜು 21 (DaijiworldNews/MS): ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಕೊನೆಗೂ ಪೊಲೀಸರು ಹಳ್ಳ ಹಿಡಿಸಿದ್ದಾರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ 40% ಸರ್ಕಾರ ಅಲ್ಲ ಎಂದು ಸಾಬೀತುಪಡಿಸುವ ಇರಾದೆಯಿದ್ದರೆ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಕೊನೆಗೂ ಪೊಲೀಸರು ಹಳ್ಳ ಹಿಡಿಸಿದ್ದಾರೆ.ಇದು ನಿರೀಕ್ಷಿತ. ಕೆಲವೇ ದಿನಗಳ ಹಿಂದಷ್ಟೆ ಸಂತೋಷ್ ಪತ್ನಿ ತನಿಖೆ ನ್ಯಾಯಯುತವಾಗಿ ನಡೆಯುತ್ತಿಲ್ಲ, ಪ್ರಮುಖ ಆರೋಪಿ ಕೆ.ಎಸ್ ಈಶ್ವರಪ್ಪ ಅವರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರಿದ್ದರು. ಕೊನೆಗೂ ಅದು ನಿಜವಾಗಿದೆ.
ಆತ್ಮಹತ್ಯೆಗೂ ಮುನ್ನ ಸಂತೋಷ್, ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದಿದ್ದರು. ಡೆತ್ನೋಟ್ ಪ್ರಬಲವಾದ ಸಾಕ್ಷಿ. ಆದರೆ ಉಡುಪಿ ಪೊಲೀಸರು ಈಶ್ವರಪ್ಪರ ವಿಚಾರಣೆಯನ್ನೇ ನಡೆಸಿಲ್ಲ. ಪ್ರಕರಣದ ಪ್ರಮುಖ ಆರೋಪಿ ಈಶ್ವರಪ್ಪರನ್ನು ವಿಚಾರಣೆ ನಡೆಸದೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದು ನ್ಯಾಯಸಮ್ಮತ ತನಿಖೆಯೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ 40% ಕಮೀಷನ್ ದಂಧೆಗೆ ಅಮಾಯಕ ಸಂತೋಷ್ ಜೀವ ಕಳೆದುಕೊಂಡರು.ಆದರೆ ಸಂತೋಷ್ ಆತ್ಮಹತ್ಯೆಗೆ ಶರಣಾದ ತಕ್ಷಣವೇ ಸ್ವತಃ ಮುಖ್ಯಮಂತ್ರಿಗಳೇ ಈಶ್ವರಪ್ಪರಿಗೆ ಕ್ಲೀನ್ಚಿಟ್ ಕೊಟ್ಟು ಈಶ್ವರಪ್ಪರನ್ನು ರಕ್ಷಿಸುವ ಕೆಲಸ ಮಾಡಿದರು. ಒಬ್ಬ ಮುಖ್ಯಮಂತ್ರಿಯೇ ಆರೋಪಿಯ ರಕ್ಷಣೆಗೆ ನಿಂತ ಮೇಲೆ, ಪೊಲೀಸರು ಪಾರದರ್ಶಕ ತನಿಖೆ ನಡೆಸಲು ಸಾಧ್ಯವೇ?
ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರಿಂದ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗಲು ಸಾಧ್ಯವಿಲ್ಲ. ಸರ್ಕಾರ ತನ್ನ ಮೇಲಿನ 40% ಕಮೀಷನ್ ಆರೋಪದಿಂದ ಪಾರಾಗಲು ಈ ಪ್ರಕರಣದಲ್ಲಿ 'ಬಿ ರಿಪೋರ್ಟ್' ಸಲ್ಲಿಸುವಂತೆ ಮಾಡಿದೆ. ಇದು 40% ಸರ್ಕಾರ ಅಲ್ಲ ಎಂದು ಸಾಬೀತುಪಡಿಸುವ ಇರಾದೆಯಿದ್ದರೆ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಸವಾಲ್ ಹಾಕಿದ್ದಾರೆ.