ನವದೆಹಲಿ, ಜು 21 (DaijiworldNews/MS): ಪಂಜಾಬ್ ಮುಖ್ಯಮಂತ್ರಿ , ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ಸಂಜೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿ ಪರೀಕ್ಷೆಗೆ ತೆರಳಿದ್ದರು. ವೈದ್ಯರ ಸಲಹೆಯಂತೆ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯು ನಡೆಸಿದ ಹೆಚ್ಚಿನ ವೈದ್ಯಕೀಯ ತನಿಖೆಗಳಲ್ಲಿ, ಅವರಿಗೆ ಹೊಟ್ಟೆಯಲ್ಲಿ ಸೋಂಕು ಕಂಡುಬಂದಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಭಗವಂತ್ ಮಾನ್ ಅವರು ಸಾಮಾನ್ಯ ತಪಾಸಣೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 16ರಂದು ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಕೆಲವು ದಿನಗಳ ಹಿಂದೆ ವೈದ್ಯರಾದ ಡಾ. ಗುರಪ್ರೀತ್ ಸಿಂಗ್ ಜೊತೆ ಮುಖ್ಯಮಂತ್ರಿ ಭಗವಂತ್ ಮಾನ್ ವಿವಾಹವಾಗಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಬುಧವಾರ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರ ವರದಿಗಳು ಇನ್ನೂ ಬರಬೇಕಿದ್ದು, ಪಂಜಾಬ್ ಸಿಎಂ ಭಗವಂತ್ ಮಾನ್ ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.