ನವದೆಹಲಿ, ಜು 20 (DaijiworldNews/SM): ಭಾರತದ ಮುಂದಿನ ರಾಷ್ಟ್ರಪತಿ ಯಾರಾಗುತ್ತಾರೆ ಎನ್ನುವುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದ್ದು, ಗುರುವಾರದಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮತಗಳ ಎಣಿಕೆ ಆರಂಭಗೊಳ್ಳಲಿದೆ.
ಸಂಸದರು ಅಭ್ಯರ್ಥಿಗಳಿಗೆ ತಮ್ಮ ಆದ್ಯತೆಯನ್ನು ಮತಪತ್ರದಲ್ಲಿ ಹಸಿರು ಶಾಯಿಯ ಪೆನ್ನಿನಿಂದ ಕ್ರಮಾನುಗತವಾಗಿ ಬರೆದಿರುತ್ತಾರೆ ಮತ್ತು ಶಾಸಕರು ಇದಕ್ಕಾಗಿ ಗುಲಾಬಿ ಶಾಯಿಯ ಪೆನ್ ಬಳಸಿರುತ್ತಾರೆ. ಇಲ್ಲಿ ಮೊದಲು ಮತಗಳನ್ನು ವಿಂಗಡಿಸಲಾಗುತ್ತದೆ ಮತ್ತು ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
ಮುರ್ಮು ಮತ್ತು ಸಿನ್ಹಾ ಅವರಿಗಾಗಿ ಎರಡು ಪ್ರತ್ಯೇಕ ಟ್ರೇಗಳನ್ನು ಇರಿಸಲಾಗುತ್ತದೆ. ಶಾಸಕರ ಮತಪತ್ರಗಳನ್ನು ಮೊದಲು ಮತ್ತು ಸಂಸದರ ಮತಪತ್ರಗಳನ್ನು ನಂತರ ವಿಂಗಡಿಸಲಾಗುತ್ತದೆ.
ಮೊದಲ ಪ್ರಾಶಸ್ತ್ಯವಾಗಿ ಮುರ್ಮು ಹೆಸರನ್ನು ಬರೆದಿರುವ ಮತಪತ್ರಗಳನ್ನು ಅವರ ಟ್ರೇನಲ್ಲಿ ಇರಿಸಲಾಗುತ್ತದೆ ಮತ್ತು ಸಿನ್ಹಾ ಹೆಸರನ್ನು ಮೊದಲ ಪ್ರಾಶಸ್ತ್ಯವಾಗಿ ಬರೆದಿರುವ ಮತಪತ್ರಗಳನ್ನು ಅವರ ಟ್ರೇನಲ್ಲಿ ಇರಿಸಲಾಗುತ್ತದೆ.
ಪ್ರತಿ ಸಂಸದನ ಮತದ ಮೌಲ್ಯವನ್ನು 700 ಎಂದು ನಿಗದಿಗೊಳಿಸಲಾಗಿದ್ದರೆ, ಶಾಸಕರ ಮತದ ಮೌಲ್ಯವು ಅವರ ರಾಜ್ಯಗಳ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ವಿಂಗಡಣೆ ಪೂರ್ಣಗೊಂಡ ಬಳಿಕ ಮತಗಳ ಎಣಿಕೆ ಆರಂಭವಾಗುತ್ತದೆ.