ಶಿವಮೊಗ್ಗ, ಜು 20 (DaijiworldNews/HR): ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಕೋರ್ಟ್ ಪೊಲೀಸರ ಬಿ-ರಿಪೋರ್ಟ್ ಅಂಗೀಕರಿಸಿಲ್ಲ ಎನ್ನಲಾಗುತ್ತಿದೆ.
ಇನ್ನು ಗುತ್ತಿಗೆದಾರ ಸಂತೋಷ್ ಏಪ್ರಿಲ್ 12 ರಂದು ಉಡುಪಿಯ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೂ ಮೊದಲು ಸಂತೋಷ್ ಸ್ನೇಹಿತರಿಗೆ ಸಂದೇಶ ಕಳಿಸಿದ್ದು, ನನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಸಂದೇಶ ಕಳುಹಿಸಿದ್ದರು.
ನಾನು ತಪ್ಪು ಮಾಡಿಲ್ಲವೆಂದು ಮನೆದೇವರು ಚೌಡೇಶ್ವರಿ ಮೇಲೆ ಆಣೆ ಮಾಡಿದ್ದೆ. ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಪ್ರಕರಣದಲ್ಲಿ ಖುಲಾಸೆ ಆಗಿದ್ದೇನೆ. ಆರೋಪದಿಂದ ಮುಕ್ತನಾಗುವ ವಿಶ್ವಾಸ ನನಗೆ ಇತ್ತು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.