ಗುಜರಾತ್, ಜು 20 (DaijiworldNews/MS): ವಾಹನಗಳ ತಪಾಸಣೆ ವೇಳೆ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ ಘಟನೆ ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋರ್ಸಾದ್ ಪಟ್ಟಣದ ಸಮೀಪ ಹೆದ್ದಾರಿಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಜಸ್ಥಾನ ನಂಬರ್ ಪ್ಲೇಟ್ ಹೊಂದಿದ್ದ ಅನುಮಾನಾಸ್ಪದ ಟ್ರಕ್ ಅನ್ನು ನಿಲ್ಲಿಸಲು ಕಾನ್ಸ್ಟೆಬಲ್ ಕಿರಣ್ ಸಿಂಗ್ ರಾಜ್(40) ಸಿಗ್ನಲ್ ತೋರಿಸಿದ್ದಾರೆ. ಆದರೆ ಕಂಟೈನರ್ ಟ್ರಕ್ ಕಾನ್ಸ್ಟೇಬಲ್ ಮೇಲೆ ವಾಹನ ಹರಿಸಿದ್ದಾನೆ . ಗಂಭೀರವಾಗಿ ಗಾಯಗೊಂಡಿದ್ದ ಅವರು ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಟ್ರಕ್ ಚಾಲಕ ತನ್ನ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ಡಿ.ಎಚ್. ದೇಸಾಯಿ ತಿಳಿಸಿದ್ದಾರೆ.
ಗುರುಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿವೈಎಸ್ಪಿ ಮೇಲೆ ಟ್ರಕ್ ಹರಿಸಿ ಕೊಲ್ಲಲಾಗಿತ್ತು. ರಾಂಚಿಯಲ್ಲೂ ವಾಹನ ತಪಾಸಣೆ ಮಾಡುತ್ತಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಸಂಧ್ಯಾ ಟೋಪ್ನೋ ಮೇಲೆ ಗೋ ಕಳ್ಳರು ವಾಹನ ಹರಿಸಿ ಹತ್ಯೆ ಮಾಡಿದ್ದರು.