ಬೆಂಗಳೂರು, ಜು 20 (DaijiworldNews/HR): ಜೈಲಿನಲ್ಲಿರುವ ಖೈದಿಗಳಿಗೆ ದಿನಗೂಲಿ ಏರಿಕೆ ಮಾಡಲಾಗಿದೆ ಎಂಬ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಖೈದಿಗಳ ದಿನಗೂಲಿಯನ್ನ 525 ರೂಗಳಿಗೆ ಏರಿಸಲಾಗಿದೆ ಎಂಬ ಸುದ್ದಿ ಹರಡಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕರ್ನಾಟಕದಲ್ಲಿ ಸುಮಾರು ಹದಿನೈದು ಸಾವಿರ ಖೈದಿಗಳು ಜೈಲುವಾಸ ಅನುಭವಿಸುತ್ತಿದ್ದು, ಜೈಲುವಾಸದಲ್ಲಿರುವ ಖೈದಿಗಳಿಗೆ ಕೂಲಿ ಹಣವನ್ನು 200 ರೂಗಳಿಂದ ಸ್ವಲ್ಪ ಹೆಚ್ಚಿಗೆ ಮಾಡುವ ಕುರಿತು ಪ್ರಸ್ತಾವನೆ ಮಾಡಲಾಗಿದೆಯೇ ಹೊರತೂ ಅಂತಹ ಆದೇಶ ಇದುವರೆಗೂ ಹೊರಡಿಸಿಲ್ಲ ಎಂದರು.
ಜೈಲು ಶಿಕ್ಷೆಯಲ್ಲಿರುವ ಹಲವು ಖೈದಿಗಳಿಂದ ಪ್ರತಿದಿನ ದುಡಿಮೆ ಮಾಡಿಸಲಾಗುತ್ತಿದ್ದು, ಪ್ರತಿಯೊಬ್ಬ ಕೈದಿಯೂ ಕೆಲಸ ಮಾಡಬೇಕಾಗುತ್ತದೆ. ವಿವಿಧ ಕೆಲಸಗಳ ಮೂಲಕ ಕೈದಿಗಳ ಖಿನ್ನತೆಯನ್ನು ಹೋಗಲಾಡಿಸಿ ಅವರ ಮನಃಪರಿವರ್ತನೆ ಮಾಡುವುದು ಇದರ ಉದ್ದೇಶ ಎಂದಿದ್ದಾರೆ.
ಇನ್ನು ಖೈದಿಗಳಿಗೆ ಕೈಮಗ್ಗ, ಕರಕುಶಲ ವಸ್ತುಗಳ ತಯಾರಿಕೆ, ಸೋಪ್, ಮೇಣದಬತ್ತಿ ತಯಾರಿಕೆ ಸೇರಿದಂತೆ ಇಲಾಖೆಗೆ ಸೇರಿದ ಕೃಷಿ ಜಮೀನಿನಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಮಾರಾಟ ಮಾಡಲಾಗುತ್ತಿದ್ದು, ಈ ಮೂಲಕ ಇಲಾಖೆಗೆ ಆದಾಯವೂ ಬರುತ್ತಿದೆ. ಆದರೆ ಶಿಕ್ಷೆಯಲ್ಲಿರುವ ಖೈದಿಗಳಿಗೆ ಈಗಲೂ ಕೊಡುತ್ತಿರುವುದು ದಿನಕ್ಕೆ 200 ರೂಗಳು. ಅದರಲ್ಲಿ ಊಟದ ಖರ್ಚು 100 ರೂಗಳನ್ನು ಸಹ ಕಳೆಯಲಾಗುತ್ತಿದೆ. ಎಂದು ಹೇಳಿದ್ದಾರೆ.