ನಾಗ್ಪುರ, ಜು 20 (DaijiworldNews/HR): ನಾಗ್ಪುರದಲ್ಲಿ ಉದ್ಯಮಿಯೊಬ್ಬರು ಹಣಕಾಸಿನ ತೊಂದರೆಯಿಂದ ತನ್ನ ಕುಟುಂಬ ಸಮೇತ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಈ ವೇಳೆ ಉದ್ಯಮಿ ಸಾವನಪ್ಪಿದರೆ, ಆತನ ಪತ್ನಿ ಮತ್ತು ಮಗ ಕಾರಿನಿಂದ ಹೊರಬಂದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಉದ್ಯಮಿ ರಾಮರಾಜ್ ಭಟ್ (58 ) ಮೃತ ಪಟ್ಟಿದ್ದು, ಪತ್ನಿ ಸಂಗೀತಾ ಭಟ್, ಮಗ ನಂದನ್ ಗಂಭೀರ ಗಾಯಗೊಂಡಿದ್ದಾರೆ.
ರಾಮರಾಜ್ ಭಟ್ ತನ್ನ ಪತ್ನಿ ಮತ್ತು ಮಗನಿಗೆ ಹೋಟೆಲ್ಗೆ ಊಟಕ್ಕೆ ಹೋಗುವುದಾಗಿ ಕರೆದುಕೊಂಡು ಬಂದಿದ್ದು, ದಾರಿ ಮಧ್ಯೆ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಇದ್ದಕ್ಕಿದ್ದಂತೆ ರಾಮರಾಜ್ ತನ್ನ ಹಾಗೂ ಪತ್ನಿ, ಮಗನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ತೀವ್ರ ಸುಟ್ಟಗಾಯಗಳಿಂದ ರಾಮರಾಜ್ ಭಟ್ ಮೃತಪಟ್ಟರೆ ಪತ್ನಿ ಮತ್ತು ಮಗ ಕಾರಿನ ಬಾಗಿಲು ತೆರೆದು ಹೊರಗೆ ಜಿಗಿದಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಸಿಕ್ಕ ಪ್ಲಾಸ್ಟಿಕ್ ಚೀಲದೊಳಗೆ ಪತ್ರವೊಂದು ಸಿಕ್ಕಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.