ಚಂಡೀಘಢ, ಜು 20 (DaijiworldNews/MS): ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿಎಸ್ಪಿ ಸುರೇಂದರ್ ಸಿಂಗ್ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ್ದ ಓರ್ವ ಆರೋಪಿಯ ಮೇಲೆ ಹರಿಯಾಣ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಟ್ರಕ್ನ ಕ್ಲೀನರ್ ಆಗಿದ್ದ ಆರೋಪಿಗಳಲ್ಲಿ ಒಬ್ಬನಾದ ಇಕ್ಕರ್ ಎಂಬಾತ ನುಹ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಗಾಯಗೊಂಡ ಕ್ಲೀನರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಕಲ್ಲು ಗಣಿಗಾರಿಕೆಯ ತನಿಖೆ ನಡೆಸುತ್ತಿದ್ದ ಟೌರು ಡಿಎಸ್ಪಿ ಸುರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಪಂಚಗಾಂವ್ ಪ್ರದೇಶದ ಅರವಳ್ಳಿ ಹಿಲ್ಸ್ ಪ್ರದೇಶದ ಅಕ್ರಮ ಕಲ್ಲುಗಾರಿಕೆ ತಡೆಗೆ ದಾಳಿ ಮಾಡಲಾಗಿತ್ತು.
ದಾಖಲೆ ಪರಿಶೀಲನೆಗೆ ಟ್ರಕ್ ನಿಲ್ಲಿಸುವಂತೆ ಡಿಎಸ್ಪಿ ಸಿಗ್ನಲ್ ಮಾಡಿದ್ದರು. ಆದರೆ, ಚಾಲಕ ಟ್ರಕ್ ಅನ್ನು ಮತ್ತಷ್ಟು ವೇಗವಾಗಿ ಓಡಿಸಿ ಟ್ರಕ್ ಗುದ್ದಿಸಿ ಕೊಂದಿದ್ದ. ಡಿಎಸ್ಪಿ ಅವರ ಜೊತೆಗಿದ್ದ ಗನ್ಮ್ಯಾನ್ ಮತ್ತು ಚಾಲಕ ಪಕ್ಕ್ಕಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಡಿಎಸ್ಪಿ ಅಸುನೀಗಿದ್ದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಡಿರುವ ಹರಿಯಾಣ ಡಿಜಿಪಿ ಪಿಕೆ ಅಗರವಾಲ್, "ಇದೊಂದು ಗಂಭೀರ ಮತ್ತು ದುಃಖಕರ ಘಟನೆ, ಗುಂಡಿನ ದಾಳಿಯ ಬಳಿಕ ಓರ್ವ ಆರೋಪಿಯನ್ನು ಬಂಧಿಸಲಾಗಿದೆ, ಅವನ ಕಾಲಿಗೆ ಗುಂಡು ಹಾರಿಸಲಾಗಿದೆ, ಇತರ ಆರೋಪಿಗಳನ್ನು ಬಂಧಿಸಲು ತಂಡ ಕಾರ್ಯಾಚರಣೆಗೆ ಇಳಿದಿದೆ. ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.