ರಾಂಚಿ, ಜು 20 (DaijiworldNews/MS): ವಾಹನ ತಪಾಸಣೆ ಮಾಡುತ್ತಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಹತ್ಯೆ ನಡೆಸಿದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಬುಧವಾರ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಜಾರ್ಖಂಡ್ನ ರಾಂಚಿಯಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಸಂಧ್ಯಾ ಟೋಪ್ನೋ ಅವರು ವಾಹನ ತಪಾಸಣೆಯ ಕರ್ತವ್ಯದಲ್ಲಿನಿರತರಾಗಿದ್ದರು. , ಈ ವೇಳೆ ವೇಗವಾಗಿ ಬಂದ ದನ ಕಳ್ಳಸಾಗಣೆ ಮಾಡುತ್ತಿದ್ದ ಪಿಕಪ್ ವ್ಯಾನ್ ಬಂದಿದ್ದು ಅದನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಚಾಲಕ ವಾಹನವನ್ನು ನಿಲ್ಲಿಸುವ ಬದಲು, ಪೊಲೀಸ್ ಅಧಿಕಾರಿಯ ಮೇಲೆ ವಾಹನ ಹರಿಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳಾ ಅಧಿಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಇದೇ ಸಮಯದಲ್ಲಿ ಎಚ್ಚೆತ್ತುಕೊಂಡ ಗಸ್ತು ಪೊಲೀಸರುವಾಹನ ಹಿಂಬಾಲಿಸಿದ್ದಾರೆ. ಅತಿ ವೇಗದಲ್ಲಿ ಚಲಿಸಿದ ಪಿಕಪ್ ವ್ಯಾನಿನ ರಿಂಗ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಕಳ್ಳಸಾಗಣೆದಾರ ಆರೋಪಿ ಗಳು ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಹರ್ಯಾಣದ ನುಹ್ ಜಿಲ್ಲೆಯಲ್ಲಿ ಮಂಗಳವಾರ ನಿಲ್ಲಿಸಲು ಸಿಗ್ನಲ್ ನೀಡಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಉಪ ಪೊಲೀಸ್ ಅಧೀಕ್ಷಕರೊಬ್ಬರು ಮೃತಪಟ್ಟಿದ್ದಾರೆ.