ಚೆನ್ನೈ, ಜು 20 (DaijiworldNews/MS): ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿತ ಕಾಣುತ್ತಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದ್ದು, ರೂಪಾಯಿ 80ಕ್ಕೆ ತಲುಪಿದೆ ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಿಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಅವರು, "ಒಂದು ಕಾಲದಲ್ಲಿ… ನನ್ನ ದೇಶದಲ್ಲಿ.." ಎನ್ನುವ ಟ್ವೀಟ್ ಮೂಲಕ ಆಡಳಿತಾರೂಢ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
"ಒಂದು ಕಾಲದಲ್ಲಿ… ನನ್ನ ದೇಶದಲ್ಲಿ.. #justasking" ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಡಾಲರ್ ಎದುರು ರೂಪಾಯಿ ಕುಸಿತ ಕಂಡಾಗ ಸರ್ಕಾರವನ್ನು ಪ್ರಶ್ನಿಸಿ 2012-2013 ರಲ್ಲಿ ಅಮಿತಾಬ್ ಬಚ್ಚನ್, ಶಿಲ್ಪಾ ಶೆಟ್ಟಿ ಕುಂದ್ರಾ , ಅನುಪಮ ಕೇರ್, ವಿವೇಕ್ ಅಗ್ನಿಹೋತ್ರಿ , ಜೂಹಿ ಚವ್ಲಾ ಮುಂತಾದ ಸೆಲೆಬ್ರಿಟಿಗಳು ಮಾಡಿದ ಟ್ವೀಟ್ ಲಗತ್ತಿಸಿ ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿದ್ದಾರೆ.
ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ಪ್ರಕೃತಿ ಪ್ರೇಮಿ ಎಂಬ ಟ್ವೀಟರ್ ಹ್ಯಾಂಡಲ್ ನಿಂದ "ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳು ಡಾ.ಮನಮೋಹನ್ ಸಿಂಗ್ ಅವರು ತಾವು ಮಾತನಾಡದೆ ಮೌನಿಯಾಗಿದ್ದು, ಬೇರೆ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು..ಆದರೆ ಈಗ ಇದೆಲ್ಲವನ್ನು ಕಿತ್ತುಕೊಳ್ಳಲಾಗಿದೆ..ಅವರು ಮಾತ್ರ ಮಾತನಾಡುತ್ತಾರೆ, ಇವರೆಲ್ಲರೂ ಮೌನಿಗಳಾಗಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.