ಬೆಂಗಳೂರು, ಜು 19 (DaijiworldNews/SM): ರಾಜ್ಯದಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಲು ಸರಕಾರ ನಿರ್ಧರಿಸಿದೆ. ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಕ್ರಮಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ- 2022ರ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, "ಸರ್ಕಾರದ ಎಲ್ಲಾ ಜಾಹೀರಾತು, ಪ್ರಕಟಣೆಗಳು, ವೆಬ್ ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರು ದಸರಾ ಲಾಂಛನವನ್ನು ಪ್ರಕಟಿಸಬೇಕು. ಮುಂಬೈ, ದೆಹಲಿ ಹಾಗೂ ಚನ್ನೈ ವಿಮಾನ ನಿಲ್ದಾಣಗಳಲ್ಲಿ ಹಾಗೂ ಇತರೆ ಸಾವಾಜನಿಕ ಸ್ಥಳಗಳಲ್ಲಿ ಮೈಸೂರು ದಸರಾ ಕುರಿತು ಪ್ರಚಾರ ಮಾಡಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿದೆ," ಎಂದರು.
ಇನ್ನು ಈ ನಡುವೆ ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ವಲಯದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲು ಕ್ರಮಕೈಗೊಳ್ಳಲಾಗಿದೆ.
ನಾಡಹಬ್ಬಕ್ಕೆ ಸಂಬಂಧಿಸಿದಂತೆ ಹಿಂದೆ ಅನುಸರಿಸುತ್ತಿದ್ದ ಗಜಪಯಣ ಸೇರಿದಂತೆ ಪಾರಂಪರಿಕ ಪದ್ದತಿಗಳನ್ನು ಪುನಃ ಪ್ರಾರಂಭಿಸಲಾಗುವುದು ಎಂದರು.