ಬೆಂಗಳೂರು, ಜು 19 (DaijiworldNews/SM): ಮದರಸಾಗಳಿಗಾಗಿ ಪ್ರತ್ಯೇಕ ಪಠ್ಯಕ್ರಮ ಪರಿಚಯಿಸುವ ಚಿಂತನೆ ರಾಜ್ಯ ಸರಕಾರದ ಮುಂದೆ ಸದ್ಯಕ್ಕೆ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಸಾಮಾನ್ಯ ಶಾಲೆಗಳಲ್ಲಿ ಕಲಿಸುವಂತಹ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತಿತರ ವಿಷಯಗಳ ಕಲಿಕೆಗೆ ಆಸಕ್ತರಾಗಿದ್ದಾರೆ. ಆ ಮಕ್ಕಳ ಪೋಷಕರು ಕೂಡ ಈ ನಿಟ್ಟಿನಲ್ಲಿ ಒತ್ತಾಸೆ ಹೊಂದಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಕ್ಕಳನ್ನು ಸಾಮಾನ್ಯ ಶಾಲೆಗಳಿಗೆ ಕಳುಹಿಸುತ್ತಿರುವುದನ್ನು ಕಾಣಬಹುದು. ಇದಕ್ಕೆ ಪರ್ಯಾಯವಾಗಿ ಉರ್ದು ಶಾಲೆಗಳಲ್ಲಿ ಹಾಜರಾತಿ ಗಣನೀಯವಾಗಿ ಇಳಿಕೆಯಾಗಿದೆ’ ಎಂದರು.
ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಪ್ರತ್ಯೇಕ ಪಠ್ಯಕ್ರಮ ಪರಿಚಯಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಸದ್ಯಕ್ಕೆ ನಮ್ಮಲ್ಲಿ ಆ ರೀತಿಯ ಚಿಂತನೆ ಅಥವಾ ಪ್ರಸ್ತಾವನೆ ಇಲ್ಲ. ಆದರೆ, ಮದರಸಾಗಳಿಗೆ ತೆರಳುವ ಮಕ್ಕಳು ಸಾಮಾನ್ಯ ಶಾಲೆಗಳಿಗೆ ತೆರಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.
ಆಗಸ್ಟ್ 9ರಿಂದ 17ರವರೆಗೆ ಪ್ರತಿ ಶಾಲೆ ಮತ್ತು ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ ಮದರಸಾಗಳಿಗೂ ಅನ್ವಯ ಆಗುವಂತೆ ಹೊರಡಿಸಿರುವ ಆದೇಶಕ್ಕೆ ಪ್ರತಿಕ್ರಿಯಿಸಿ, “ಮದರಸಾಗಳೂ ದೇಶದಲ್ಲೇ ಇವೆ. ಈ ರಾಷ್ಟ್ರದ ಧ್ವಜವನ್ನು ಉಳಿದ ಶಾಲೆಗಳಂತೆಯೇ ಮದರಸಾಗಳ ಮೇಲೂ ರಾರಾಜಿಸಬೇಕು. ಆ ಸಮುದಾಯದ ಮುಖಂಡರೂ ಕೂಡ ಈ ಆಶಯ ವ್ಯಕ್ತಪಡಿಸಿದ್ದಾರೆ’ ಎಂದರು.