ಬೆಂಗಳೂರು, ಜು 19 (DaijiworldNews/SM): ಕರಾವಳಿ ಭಾಗದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಕಳೆದವಾರ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಸಮಸ್ಯೆಯಾಗಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ನಡುವೆ ಘಾಟ್ ರಸ್ತೆಗಳಲ್ಲಿ ಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಗುಡ್ಡ ಕುಸಿತದಿಂದಾಗಿ ಸಂಪಾಜೆ ಘಾಟ್ ನಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದೀಗ ಬುಧವಾರದಿಂದ ಎಲ್ಲಾ ವಾಹನಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಶಿರಾಡಿ ಘಾಟ್, ಚಾರ್ಮುಡಿ ಘಾಟ್ ಮತ್ತು ಆಗುಂಬೆ ಘಾಟ್ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಆ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಸಂಪಾಜೆ ಘಾಟ್ ರಸ್ತೆಯಲ್ಲಿ ನಾಳೆ(ಜು.20)ಯಿಂದ ಭಾರೀ ವಾಹನಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಅಲ್ಲದೆ, ದೋಣಿಗಾಲ್ ಬಳಿ ಎರಡೂವರೆ ಕಿ.ಮೀ ಏಕಮುಖ(ಒನ್ವೇ) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು' ಎಂದು ಸ್ಪಷ್ಟಣೆ ನೀಡಿದರು.
‘ರಾಜಧಾನಿ ಬೆಂಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಹೋಗುವ ವಾಹನಗಳು ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗುವುದು. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳು ದೋಣಿಗಾಲ್ ಹತ್ತಿರದ ಕಪ್ಪಳ್ಳಿ, ಕೆಸಗಾನಹಳ್ಳಿ ಮಾರ್ಗವಾಗಿ ಹಳೆಯ ರಸ್ತೆ ಇದ್ದು ಅದನ್ನು ಬಳಸಬೇಕು. ಈ ರಸ್ತೆಯನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆಮಾರ್ಗಕ್ಕೆ ತೀರ್ಮಾನಿಸಲಾಗಿದೆ ಎಂದು ಸಿ.ಸಿ.ಪಾಟೀಲ್ ಹೇಳಿದರು.
‘ಶಿರಾಡಿ ಘಾಟ್ನಲ್ಲಿ ಏಕಮುಖ ಸಂಚಾರ ತಾತ್ಕಾಲಿಕವಾಗಿದ್ದು, ದೋಣಿಗಾಲ್ ಬಳಿ ರಸ್ತೆ ಸರಿಪಡಿಸಿದ ಬಳಿಕ ನಿಗದಿಯಂತೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಕಾಮಗಾರಿಯನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಸ್ತೆಗಳ ಸ್ಥಿತಿಗತಿಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ' ಎಂದು ಅವರು ತಿಳಿಸಿದರು.