ಚಂಡೀಗಢ, ಜು 19 (DaijiworldNews/MS): ಹರಿಯಾಣದ ನುಹ್ ಜಿಲ್ಲೆಯ ಮೇವಾತ್ನಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಹೋದ ಡಿಎಸ್ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿರುವ ಭಯಾನಕ ಘಟನೆ ವರದಿಯಾಗಿದೆ.
ಅರಾವಳಿ ಬೆಟ್ಟದ ಬಳಿ ಗಣಿ ಮಾಫಿಯಾ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಡಿಎಸ್ಪಿ ಸುರೇಂದ್ರ ಸಿಂಗ್ ಅವರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಅವರು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದರು.
ಪೊಲೀಸ್ ಸಿಬ್ಬಂದಿಯನ್ನು ಕಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಆರಂಭಿಸಿದರು. ಹಿರಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ದಾರಿಯಲ್ಲಿ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್ನ ಚಾಲಕ ಆತನ ಮೇಲೆ ಟ್ರಕ್ ಹರಿಸಿದ್ದು, ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಪೊಲೀಸರು ಪಕ್ಕಕ್ಕೆ ಜಿಗಿದಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಂತರ ಆರೋಪಿಗಳು ಪ್ರದೇಶದಿಂದ ಪರಾರಿಯಾಗಿದ್ದಾರೆ.
ಆಘಾತಕಾರಿ ಘಟನೆಯ ನಂತರ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಗಣಿಗಾರಿಕೆ ಮಾಫಿಯಾವನ್ನು ಬಿಡುವುದಿಲ್ಲ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ, ಯಾರನ್ನೂ ಬಿಡುವುದಿಲ್ಲ ನಮಗೆ ಎಷ್ಟು ಬಲ ಬೇಕೋ ಅಷ್ಟು ಬಲ ಪ್ರಯೋಗ ಮಾಡುತ್ತೇವೆ. ಅಕ್ಕಪಕ್ಕದ ಜಿಲ್ಲೆಗಳ ಪಡೆಗಳನ್ನು ನಿಯೋಜಿಸಬೇಕಾದರೂ ಅದನ್ನು ಮಾಡುತ್ತೇವೆ ಯಾವುದೇ ಕಾರಣಕ್ಕೂ ಗಣಿ ಮಾಫಿಯಾವನ್ನು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.