ಇಟಾನಗರ , ಜು 19 (DaijiworldNews/MS): ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ.
ಕುರುಂಗ್ ಕುಮೇ ಜಿಲ್ಲೆಯ ಡ್ಯಾಮಿನ್ನಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರು ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದರು.ಜುಲೈ 5 ರಿಂದ ಎಲ್ಲಾ 19 ಮಂದಿ ಯೋಜನಾ ಸ್ಥಳದಿಂದ ನಾಪತ್ತೆಯಾಗಿದ್ದಾರೆ ಮತ್ತು ಒಬ್ಬ ಕಾರ್ಮಿಕನ ಶವ ಹತ್ತಿರದ ನದಿಯಲ್ಲಿ ಪತ್ತೆಯಾಗಿದೆ.
ಗಡಿ ರಸ್ತೆಗಳ ಸಂಸ್ಥೆಯು ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯ ಯೋಜನೆಗಳ ವ್ಯಾಪಕ ಜಾಲವನ್ನು ನಿರ್ಮಿಸುತ್ತಿದೆ. ಭಾರತ-ಚೀನಾ ಗಡಿಯ ಸಮೀಪವಿರುವ ಡಾಮಿನ್ ವೃತ್ತದಲ್ಲಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈ ಕಾರ್ಮಿಕರನ್ನು ಕರೆತರಲಾಗಿತ್ತು.ಸೋಮವಾರ ಡಾಮಿನ್ ವೃತ್ತದ ಅಡಿಯಲ್ಲಿ ಫುರಕ್ ನದಿ ಎಂಬ ಹೆಸರಿನ ಸಣ್ಣ ನದಿಯಲ್ಲಿ ಒಬ್ಬ ಕಾರ್ಮಿಕನ ಶವ ಪತ್ತೆಯಾಗಿದೆ.
ಕಾರ್ಮಿಕರು ಈದ್ ಹಬ್ಬವನ್ನು ಆಚರಿಸಲು ರಜೆ ನೀಡುವಂತೆ ಗುತ್ತಿಗೆದಾರ ಬೆಂಗಿಯಾ ಬಡೋಗೆ ಮನವಿ ಮಾಡಿದ್ದರು, ಆದರೆ ಗುತ್ತಿಗೆದಾರ ಅನುಮತಿ ನೀಡಲು ನಿರಾಕರಿಸಿದಾಗ ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಕುರುಂಗ್ ಕುಮೇ ಜಿಲ್ಲೆಯ ದಟ್ಟವಾದ ಕಾಡಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.