ಅಸ್ಸಾಂ , ಜು 19 (DaijiworldNews/MS): ತಲೆಮರೆಸಿಕೊಂಡಿರುವ ನಾಯಕ ಪರೇಶ್ ಅಸೋಮ್ ಅಲಿಯಾಸ್ ಪರೇಶ್ ಬರುವಾ ನೇತೃತ್ವದ ಭಯೋತ್ಪಾದಕ ಗುಂಪು ಉಲ್ಫಾ (ಐ) ಅನ್ನು ಬೆಂಬಲಿಸಿ ಫೇಸ್ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ ಆರೋಪದಲ್ಲಿ ಅಸ್ಸಾಂನಲ್ಲಿ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಬಂದಿತನನ್ನು ತಂಗ್ಲಾ ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಕಲಿತಾ (22) ಎಂದು ಗುರುತಿಸಲಾಗಿದೆ.
ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯಲ್ಲಿನ ತನ್ನ ಪೋಸ್ಟ್ನಲ್ಲಿ, ʻಉದಲಗುರಿಯ ಬೋರಂಗಬರಿಯ ನಿವಾಸಿ ಕಲಿತಾ, ಉಲ್ಫಾ-I ಮತ್ತು ಗುಂಪಿನ ನಾಯಕ ಪರೇಶ್ ಬರುವಾಗಾಗಿ ತನ್ನ ಪ್ರಾಣವನ್ನು ಅರ್ಪಿಸಲು ಸಿದ್ಧನಿದ್ದೇನೆ. ನಾನು ಯಾವಾಗಲೂ ಉಲ್ಫಾವನ್ನು ಬೆಂಬಲಿಸುತ್ತೇನೆʼ ಎಂದು ಬರೆದುಕೊಂಡಿದ್ದಾನೆ.
ಬಂಧಿತನ ವಿರುದ್ಧ ಕಲೈಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಸ್ಸಾಂನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಎರಡನೇ ಬಂಧನವಾಗಿದೆ. ಮೇ 18 ರಂದು, ಗೋಲಾಘಾಟ್ನ ಪೊಲೀಸರು ಜೋರ್ಹತ್ನ ಡಿಸಿಬಿ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಬರ್ಷಶ್ರೀ ಬುರಾಗೊಹೈನ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಕ್ಕಾಗಿ ಬಂಧಿಸಿದ್ದರು.