ಬೆಂಗಳೂರು, ಜು 19 (DaijiworldNews/MS): ಕೆಎಂಎಫ್ ನಿಂದ ನಂದಿನಿ ಉತ್ಪನ್ನಗಳಾದಂತ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರ ಇಳಿಕೆ ಮಾಡಲಾಗಿದೆ. GST 5% ನಿಂದ ಮೂರು ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಜನರಿಗೆ ಹೆಚ್ಚು ಹೊರೆಯಾದ ಹಿನ್ನಲೆ ಕೆಎಂಎಫ್ ಮತ್ತೆ ದರದಲ್ಲಿ ಮರು ಪರಿಷ್ಕರಣೆ ಮಾಡಿದೆ. ಇದೀಗ ಈ ದರಗಳನ್ನು ಕೊಂಚ ಕಡಿಮೆ ಮಾಡಿದೆ.
ಈ ಬಗ್ಗೆ ಕರ್ನಾಟಕ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಜಿ ಎಸ್ ಟಿ ವಿಧಿಸಿದ ಕಾರಣ, ಜಿಎಸ್ಟಿ ದರದಂತೆ ಪರಿಷ್ಕೃತ ದರವನ್ನು ಹೊರಡಿಸಲಾಗಿತ್ತು.
ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರವನ್ನು ಹಿಂಪಡೆದು, ಗ್ರಾಹಕರ ಹಿತ ದೃಷ್ಟಿಯಿಂದ ದಿನಾಂಕ 19-07-2022ರಿಂದ ಜಾರಿಗೆ ಬರುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರಗಳನ್ನು ಮರುಪರಿಷ್ಕರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ 200ML ಮೊಸರಿನ ಬೆಲೆ ಹಿಂದೆ 10 ರೂಪಾಯಿ, ನಿನ್ನೆ - 12 ರೂಪಾಯಿ, ಇಂದಿನಿಂದ - 10.50.ಪೈಸೆ , ಮೊಸರಿನ ಬೆಲೆ 50 ಪೈಸೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿದೆ. ಆದರೆ ಇದರಿಂದ ಈಗ ಚಿಲ್ಲರೆಯ ಹೊಸ ಸಮಸ್ಯೆ ಉದ್ಬವವಾಗಲಿದೆ.