ನವದೆಹಲಿ,ಜು 18 (DaijiworldNews/MS): ಆನ್ಲೈನ್ ಫುಡ್ ಡೆಲಿವರಿ ಸೇವೆಯನ್ನು ಒದಗಿಸುವ ದೇಶದ ಪ್ರಮುಖ ಪ್ಲಾಟ್ಫಾರಂಗಳಾದ ಜೊಮ್ಯಾಟೋ ಹಾಗೂ ಸ್ವಿಗ್ಗಿ ನಡುವಿನ ಪೈಪೋಟಿಯು , ಸ್ವಿಗ್ಗಿ ಮತ್ತು ಜೊಮ್ಯಾಟೋ ಡೆಲಿವರ್ ಬಾಯ್ ಗಳ "ಸುಂದರ ಸ್ನೇಹ" ಕ್ಕೆ ಅಡ್ಡಿಯಾಗದ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ದೆಹಲಿಯ ಸುಡುತ್ತಿರುವ ಬಿಸಿಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್, ಜೊಮ್ಯಾಟೋ ಸಿಬ್ಬಂದಿಗೆ ಸಹಾಯಹಸ್ತ ಚಾಚಿದ್ದಾರೆ. ಸ್ವಿಗ್ಗಿ ಹಾಗೂ ಜೊಮ್ಯಾಟೋ ಸಂಸ್ಥೆಯ ನಡುವೆ ತೀವ್ರವಾದ ಪ್ರತಿಸ್ಪರ್ಧೆ ಇದ್ದು, ಆಹಾರ ವಿತರಣಾ ಸಿಬ್ಬಂದಿ ಪರಸ್ಪರ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜೊಮ್ಯಾಟೋ ಸಂಸ್ಥೆಯ ಡೆಲಿವರಿ ಬಾಯ್ ಆಹಾರ ವಿತರಿಸಲು ಸೈಕಲ್ ನಲ್ಲಿ ಸಾಗುತ್ತಿದ್ರೆ, ಸ್ವಿಗ್ಗಿ ಡೆಲಿವರಿ ಬಾಯ್ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದು ಈ ವೇಳೆ ಸ್ವಿಗ್ಗಿ ಸಿಬ್ಬಂದಿ, ಜೊಮ್ಯಾಟೋ ಡೆಲಿವರಿ ಬಾಯ್ ನ ಸೈಕಲ್ ಅನ್ನು ತನ್ನ ಕೈಯಲ್ಲಿ ಹಿಡಿದು ಬೈಕ್ ನ ವೇಗಕ್ಕೆ ಸರಿಸಮವಾಗಿ ಸಾಗಲು ಸಹಾಯ ಮಾಡಿದ್ದಾರೆ.
ಈ ಹೃದಯಸ್ಪರ್ಶಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.