ತಮಿಳುನಾಡು, ಜು 18 (DaijiworldNews/HR): ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದಲ್ಲಿ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಈವರೆಗೆ ಐವರು ಶಿಕ್ಷಕರು ಮತ್ತು ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಜುಲೈ 13 ರಂದು 12 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್ ಕಟ್ಟಡದಿಂದ ಜಿಗಿದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಶಿಕ್ಷಕಿಯೊಬ್ಬಳು ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಾಲೆಯ ರಸಾಯನಶಾಸ್ತ್ರ ಶಿಕ್ಷಕಿ ಹರಿಪ್ರಿಯಾ ಮತ್ತು ಗಣಿತ ಶಿಕ್ಷಕಿ ಕೃತಿಕಾ ಅವರನ್ನು ಇಂದು ಬಂಧಿಸಲಾಗಿದ್ದು, ಈ ಹಿಂದೆ ಪ್ರಾಂಶುಪಾಲರು ಮತ್ತು ಕಾರ್ಯದರ್ಶಿ ಸೇರಿದಂತೆ ಶಾಲೆಯ ಮೂವರು ಆಡಳಿತ ಮಂಡಳಿ ಅಧಿಕಾರಿಗಳನ್ನು ಬಂಧಿಸಲಾಗಿತ್ತು.
ಇನ್ನು ವಿದ್ಯಾರ್ಥಿನಿ ಆತ್ಮಹತ್ಯೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕಲ್ಲಕುರಿಚಿಯ ಚಿನ್ನಸಲೇಂ ಎಂಬಲ್ಲಿ ಭಾನುವಾರ ಪ್ರತಿಭಟನೆ ನಡೆದಿದ್ದು, ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ತಳ್ಳಿ ಶಾಲಾ ಆವರಣದೊಳಗೆ ನುಗ್ಗಿದ್ದಾರೆ. ಅಲ್ಲದೆ ಶಾಲೆ ಬಸ್ನ ಕಿಟಕಿ, ಗಾಜು ಒಡೆದು ಬೆಂಕಿ ಹಚ್ಚಿದ್ದಾರೆ.