ಭೋಪಾಲ್, ಜು 17 (DaijiworldNews/SM): ದೇಶದಲ್ಲಿ ಆಪ್ ಪಕ್ಷ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಇದೀಗ ಮಧ್ಯಪ್ರದೇಶದತ್ತ ಆಪ್ ಪಕ್ಷ ಲಗ್ಗೆ ಇಟ್ಟಿದೆ. ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶ ರಾಜಕೀಯಕ್ಕೆ ಪ್ರವೇಶ ಮಾಡಿದೆ.
ರಾಣಿ ಅಗರವಾಲ್ ಅವರು ನಿರ್ಗಮಿತ ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಕ್ಷರಾಗಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಚಂದ್ರ ಪ್ರತಾಪ್ ವಿಶ್ವಕರ್ಮ ಅವರನ್ನು ಸೋಲಿಸಿದರು. ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಣಿ ಅಗರವಾಲ್ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದರು ಮತ್ತು ದೇಶದಾದ್ಯಂತ ಜನರು ತಮ್ಮ ಪಕ್ಷದ ಪ್ರಾಮಾಣಿಕ ರಾಜಕೀಯ ವನ್ನು ಮೆಚ್ಚುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಶನ್ ಆದಾಯದ ದೃಷ್ಟಿಯಿಂದ ಇಂದೋರ್ ನಂತರ ರಾಜ್ಯದ ಎರಡನೇ ಶ್ರೀಮಂತ ಮುನ್ಸಿಪಲ್ ಕಾರ್ಪೊರೇಶನ್ ಆಗಿದೆ. ಸಿಂಗ್ರೌಲಿ ಜಿಲ್ಲೆಯನ್ನು ರಾಜ್ಯದ ವಿದ್ಯುತ್ ಉತ್ಪಾದಕ ಮತ್ತು ಕಲ್ಲಿದ್ದಲು ಮತ್ತು ಖನಿಜ ಗಣಿಗಾರಿಕೆ ಕೇಂದ್ರವೆಂದು ಪರಿಗಣಿಸಲಾಗಿದೆ.
ಇತ್ತೀಚೆಗೆ ಮೇಯರ್ ಚುನಾವಣೆ ನಡೆದ ಮಧ್ಯಪ್ರದೇಶದ 11 ನಾಗರಿಕ ಸಂಸ್ಥೆಗಳ ಪೈಕಿ, ಬುರ್ಹಾನ್ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್ನಲ್ಲಿ ಬಿಜೆಪಿ ಇದುವರೆಗೆ ವಿಜಯಶಾಲಿಯಾಗಿದೆ, ಆದರೆ ಸಿಂಗ್ರೌಲಿಯಲ್ಲಿ ಗೆಲ್ಲುವ ಮೂಲಕ ಎಎಪಿ ತನ್ನ ಖಾತೆಯನ್ನು ತೆರೆದಿದೆ. ಕಾಂಗ್ರೆಸ್ ಇದುವರೆಗೆ ಒಂದು ಸ್ಥಾನ ಗೆದ್ದಿದೆ.