ಹೆಬ್ರಿ, ಜು 17 (DaijiworldNews/HR): ಆಗುಂಬೆ ಘಾಟಿಯ 4ನೇ ಸುತ್ತಿನಲ್ಲಿ ಭೂಕುಸಿತವಾಗಿ ಈಗಾಗಲೇ ಬಸ್ ಸಂಚಾರ ಸ್ಥಗಿತಗೊಂಡು ಒಂದು ವಾರ ಕಳೆದಿದೆ. ಇದೇ ವೇಳೆ ಸುರಿಯುತ್ತಿರುವ ಭಾರೀ ಮಳೆಯಿಂದ 3ನೇ ಸುತ್ತಿನ ರಸ್ತೆಯಲ್ಲಿ ಬಿರುಕು ಕಂಡಿದ್ದು ಮತ್ತೆ ಕುಸಿಯುವ ಭೀತಿ ಎದುರಾಗಿದೆ.
ಶನಿವಾರ ಆಗುಂಬೆ ಘಾಟಿಯಲ್ಲಿ 17 ಸೆ.ಮೀ. ಮಳೆಯಾಗಿದ್ದು ಭಾರೀ ಮಳೆಯ ಕಾರಣ ಘಾಟಿಯ ಪ್ರತಿ ಸುತ್ತಿನಲ್ಲೂ ತಡೆಗೋಡೆಯ ಬದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಬಿರುಕು ಕಾಣುತ್ತಿದೆ ಎನ್ನಲಾಗುತ್ತಿದೆ.
ಇದೇ ರೀತಿ ಮಳೆ ಮುಂದುವರಿದರೆ ಬಿರುಕು ಬಿಟ್ಟ ಸ್ಥಳದಲ್ಲಿ ನೀರು ಹರಿದು ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು ಶಿವಮೊಗ್ಗ, ಚಿಕ್ಕಮಗಳೂರಿನಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರಿಗೆ ಸಮಸ್ಯೆಯಾಗಿದೆ. ಸದ್ಯ ಕಾರು ಹಾಗೂ ದ್ವಿಚಕ್ರವಾಹನಗಳ ಸಂಚಾರಕ್ಕೆ ಅವಕಾಶವಿದ್ದು ಇದೇ ರೀತಿ ಮಳೆ ಮುಂದುವರಿದರೆ ಲಘವಾಹನ ಸಂಚಾರ ಕೂಡ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.