ಕಲ್ಲಕುರಿಚಿ(ತಮಿಳು ನಾಡು), ಜು 17 (DaijiworldNews/DB): ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕೆಂದು ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಕಲ್ಲಕುರಿಚಿ ಜಿಲ್ಲೆಯ ಕನ್ನಿಯಮೂರಿನಲ್ಲಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ ಶಾಲಾ ಬಸ್ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರ ಕಿರುಕುಳದಿಂದ ನೊಂದು 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕಲ್ಲಕುರಿಚಿಯ ಚಿನ್ನಸಲೇಂ ಎಂಬಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ತಳ್ಳಿ ಶಾಲಾ ಆವರಣದೊಳಗೆ ನುಗ್ಗಿದ್ದಾರೆ. ಅಲ್ಲದೆ ಶಾಲೆ ಬಸ್ನ ಕಿಟಕಿ, ಗಾಜು ಒಡೆದು ಬೆಂಕಿ ಹಚ್ಚಿದ್ದಾರೆ. ಹಲವು ಬಸ್ಗಳನ್ನು ತಲೆಕೆಳಗಾಗಿಸಿದ್ದಾರೆ. 13ಕ್ಕೂ ಹೆಚ್ಚು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದ್ದು, ಕೆಲವಕ್ಕೆ ಹಾನಿಗೊಳಿಸಲಾಗಿದೆ. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರವಾಯು ಸಿಡಿಸಿದರು. ಆಗ ಪೊಲೀಸ್ ಸಿಬಂದಿ ಮೇಲೆಯೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಡಿಐಜಿ ಎಂ. ಪಾಂಡಿಯಾನ್ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಶಾಲೆಯ ಕಿಟಕಿ, ಗಾಜು ಮುರಿದು ತರಗತಿಯೊಳಗೆ ನುಗ್ಗಿರುವ ಪ್ರತಿಭಟನಾಕಾರರು ಪ್ರಾಂಶುಪಾಲರು ಮತ್ತು ಶಿಕ್ಷಕರ ಕೊಠಡಿಯೊಳಗಿರುವ ವಸ್ತುಗಳನ್ನೂ ಧ್ವಂಸಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲಕುರಿಚಿ ಜಿಲ್ಲೆಯಲ್ಲಿರುವ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು. ವಿದ್ಯಾರ್ಥಿನಿ ಸಾವಿನ ಬಗ್ಗೆ ಶಂಖೆ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಪೋಷಕರು ಮತ್ತು ಇತರ ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸಿದ್ದರು. ಅಲ್ಲದೆ ಶವ ಪಡೆಯಲು ನಿರಾಕರಿಸಿದ್ದರು. ಇಂದು ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಚಿನ್ನ ಸಲೇಂ-ಕಲ್ಲಕುರಿಚಿ ರಸ್ತೆ ತಡೆದು ಕಣಿಯಮೂರಿನ ಖಾಸಗಿ ಶಾಲೆಯತ್ತ ತೆರಳಲು ಮುಂದಾದಾಗ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರೆಡೆಗೆ ಕಲ್ಲು ತೂರಾಟ ನಡೆಸಿ ಶಾಲೆಯ ಆವರಣದತ್ತ ನುಗ್ಗಿದರು. ಕಲ್ಲಕುರಿಚಿ, ಚಿನ್ನಸಲೇಂ, ನೈನಾರ್, ಪಲಾಯಮ್ ತಾಲೂಕುಗಳಲ್ಲಿ ಜು. 31ರವರೆಗೆ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿ ಪಿ. ಎನ್. ಶ್ರೀಧರ್ ಆದೇಶಿಸಿದ್ದಾರೆ.