ಕೋಲ್ಕತಾ, ಜು 17 (DaijiworldNews/DB): ಕಚ್ಚಾ ಬಾಂಬ್ ಸ್ಪೋಟಿಸಿ ಇಬ್ಬರು ಸಾವನ್ನಪ್ಪಿ, ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಭಾನುವಾರ ನಸುಕಿನ ವೇಳೆ ನಡೆದಿದೆ.
ಮೃತರನ್ನು ಫರ್ಜಾನ್ ಎಸ್.ಕೆ. (45) ಮತ್ತು ಸಫಿಕುಲ್ ಇಸ್ಲಾಂ (30) ಎಂದು ಗುರುತಿಸಲಾಗಿದೆ. ಗಾಯಾಳುವಿಗೆ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಣಿಕ್ಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ ಜೆಸರತ್ತಲಾ ಬಲುತೋಲಾ ಎಂಬಲ್ಲಿನ ಹೊಲವೊಂದರಲ್ಲಿ ಬಾಂಬ್ ತಯಾರಿಕೆಯಲ್ಲಿ ಇವರೆಲ್ಲರು ತೊಡಗಿದ್ದರು. ಈ ವೇಳೆ ಆಕಸ್ಮಿಕವಾಗಿ ಬಾಂಬ್ ಸ್ಪೋಟಗೊಂಡಿದೆ. ತಡರಾತ್ರಿ ಭಾರೀ ಸ್ಪೋಟದ ಸದ್ದು ಕೇಳಿಸಿತ್ತು ಎಂದು ಸ್ಥಳೀಯರು ತಿಳಿಸಿರುವುದಾಗಿ ವರದಿಯಾಗಿದೆ.
ಗಾಯಗೊಂಡ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರಲ್ಲಿ ಇಬ್ಬರು ಆ ವೇಳೆಗಾಗಲೇ ಸಾವನ್ನಪ್ಪಿದ್ದರು. ಕಚ್ಚಾ ಬಾಂಬ್ ತಯಾರಿಸಲು ಬಳಸುತ್ತಿದ್ದ ಕಚ್ಚಾ ವಸ್ತುಗಳು ಸ್ಥಳದಲ್ಲಿ ದೊರಕಿವೆ. ಈ ಸ್ಪೋಟಕಗಳನ್ನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ತಯಾರಿಕೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.