ಬೆಂಗಳೂರು, ಜು 17 (DaijiworldNews/DB): ಹುಟ್ಟುಹಬ್ಬದ ದಿನದಂದೇ ಯುವಕನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ (25) ಎಂದು ಗುರುತಿಸಲಾಗಿದೆ. ಈತನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರು ಕರೆ ಮಾಡಿ ಮನೆಯಿಂದ ಹೊರ ಬರಲು ಹೇಳಿದ್ದರು. ಅದರಂತೆ ನಿನ್ನೆ ರಾತ್ರಿ ಮನೆಯಿಂದ ಹೇಮಂತ್ ಹೊರ ಹೋಗಿದ್ದ. ಆದರೆ ಇಂದು ಬೆಳಗ್ಗೆ ಕೋನಸಂದ್ರ ಬಳಿ ಬರ್ಬರವಾಗಿ ಹತ್ಯೆಯಾದ ರೀತಿಯಲ್ಲಿ ಹೇಮಂತ್ ಶವ ಪತ್ತೆಯಾಗಿದೆ.
ಮಾರಕಾಸ್ತ್ರಗಳಿಂದ ಹೇಮಂತ್ ಮೇಲೆ ಹಲ್ಲೆ ನಡೆಸಿ ಬಳಿಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಪರಿಚಿತರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.