ಬೆಂಗಳೂರು, ಜು 17 (DaijiworldNews/HR): ರಾಜ್ಯ ಸರ್ಕಾರದ ಭ್ರಷ್ಟರ ವಿರುದ್ಧದ ಪತ್ರಗಳಿಂದಲೇ ಪ್ರಧಾನಿ ಕಚೇರಿಯ 'ಡ್ರಾಪ್ ಬಾಕ್ಸ್' ತುಂಬಲಿದೆ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ರಾಜ್ಯ ಸರ್ಕಾರದ ಭ್ರಷ್ಟರ ವಿರುದ್ಧದ ಪತ್ರಗಳಿಂದಲೇ ಪ್ರಧಾನಿ ಕಚೇರಿಯ 'ಡ್ರಾಪ್ ಬಾಕ್ಸ್' ತುಂಬಲಿದೆ. 'ನಾ ಖಾವುಂಗಾ, ನಾ ಖಾನೆದುಂಗಾ' ಎನ್ನುತ್ತಿದ್ದ ಪ್ರಧಾನಿಗಳು ಇಷ್ಟೆಲ್ಲ ಪತ್ರಗಳು ನೇರವಾಗಿ ತಮ್ಮ ಕಚೇರಿಗೆ ಬಂದರೂ 'ನಾ ಬಾತ್ ಕರೂಂಗಾ' ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಅವರು ತುಟಿ ಬಿಚ್ಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಇನ್ನು ತೋಟಗಾರಿಕಾ ಸಚಿವ ಮುನಿರತ್ನರವರ ಕಮಿಷನ್ ಲೂಟಿಯ ಬಗ್ಗೆ ಪ್ರಧಾನಿಗೆ ಪತ್ರ ತಲುಪಿದೆ, ನಿಮಗೂ ಬರಲಿಲ್ಲವೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಹನಿ ನೀರಾವರಿ ವಿತರಕರ ಸಂಘ ನಿಮಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದ ತಾವು ಭ್ರಷ್ಟಾಚಾರದ ರಕ್ಷಕರಂತೆ ನಿಂತಿದ್ದೀರಿ. ಈ ಆರೋಪಕ್ಕೆ ತನಿಖೆ ನಡೆಸಿ 'ಪಾರದರ್ಶಕತೆ' ನಿರೂಪಿಸುತ್ತೀರಾ? ಎಂದು ಕೇಳಿದೆ.
ಪ್ರಧಾನಿಗಳೇ, ಹಿಂದೊಮ್ಮೆ ಸಚಿವ ಮುನಿರತ್ನರನ್ನು 'ಭ್ರಷ್ಟ' ಎಂದು ಹೇಳಿದ್ದಿರಿ, ಈಗ ನಿಮ್ಮ ಹೇಳಿಕೆಗೆ ಪೂರಕವೆಂಬಂತೆ ಅವರ ವಿರುದ್ಧದ ದೂರು ನಿಮ್ಮ ಮುಂದಿದೆ. 'ನಾ ಖಾನೆದುಂಗಾ' ಎನ್ನುತ್ತಿದ್ದ ತಾವು ಈಗ ಕೈಗೊಳ್ಳುವ ಕ್ರಮವೇನು? ಭ್ರಷ್ಟಾಚಾರಕ್ಕೆ ಹಾಗೂ 40% ಕಮಿಷನ್ಗೆ ಬೆಂಬಲಿಸುತ್ತೀರಾ? ಕ್ರಮ ಕೈಗೊಳ್ಳುವಿರಾ? ಅಥವಾ 40% ಕಮಿಷನ್ನಲ್ಲಿ ಪಾಲು ಕೇಳುವಿರಾ? ಎಂದು ಪ್ರಶ್ನಿಸಿದೆ.