ಬೆಂಗಳೂರು, ಜು 17 (DaijiworldNews/DB): ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮೆಕ್ಯಾನಿಕ್ವೊಬ್ಬನನ್ನು ದಂಪತಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಾವೇದ್ ಖಾನ್ (25) ಕೊಲೆಯಾದವ. ಕೊಲೆ ಮಾಡಿದ ಆರೋಪದಲ್ಲಿ ಸಿಮ್ರಾನ್ ಮತ್ತು ಆಕೆಯ ಪತಿ ಜಿಹಾನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಎಂಟು ತಿಂಗಳಿನಿಂದ ಶಿವಾಜಿನಗದಲ್ಲಿ ವಾಸವಿದ್ದ ಸಿಮ್ರಾನ್ ಮತ್ತು ಜಿಹಾನ್ ಇತ್ತೀಚೆಗೆ ಮನೆ ಬದಲಾಯಿಸಲು ನಿರ್ಧರಿಸಿದ್ದ ವೇಳೆ ಸಿಮ್ರಾನ್ಗೆ ಜಾವೇದ್ನ ಪರಿಚಯವಾಗಿದೆ. ಈ ಪರಿಚಯ ಇಬ್ಬರ ನಡುವೆ ಆತ್ಮೀಯತೆ ಬೆಳೆಯಲು ಕಾರಣವಾಗಿತ್ತು. ಇದು ಸಿಮ್ರಾನ್ ಪತಿ ಜಿಹಾನ್ಗೆ ಗೊತ್ತಾಗಿದ್ದು, ಪತ್ನಿ ಸಿಮ್ರಾನ್ ಮತ್ತು ಜಾವೇದ್ಗೆ ಎಚ್ಚರಿಕೆ ನೀಡಿದ್ದ. ಬಳಿಕ ಸಿಮ್ರಾನ್ ಜಾವೇದ್ನನ್ನು ದೂರ ಮಾಡಿದ್ದಳು.
ಆದರೆ ಜಾವೇದ್ ಆಗಾಗ ಸಿಮ್ರಾನ್ ಮನೆ ಬಳಿ ಬಂದು ಗಲಾಟೆ ಎಬ್ಬಿಸುತ್ತಿದ್ದ ಕಾರಣ ಮೂರು ತಿಂಗಳ ಹಿಂದೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಜಾವೇದ್ನನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಆದರೆ ಶನಿವಾರ ಬೆಳಗ್ಗೆ ಸಿಮ್ರಾನ್ ಮನೆಗೆ ಬಂದ ಜಾವೇದ್ ಖಾನ್, ತನ್ನೊಂದಿಗೆ ಇರುವಂತೆ ಆಕೆಯ ಬಳಿ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ದಂಪತಿ ಚಾಕುವಿನಿಂದ ಆತನ ಕುತ್ತಿಗೆಗೆ ಇರಿದಿದ್ದಾರೆ ಎನ್ನಲಾಗಿದೆ.
ತೀವ್ರ ಗಾಯಗೊಂಡ ಜಾವೇದ್ ಸಮೀಪದ ಆಸ್ಪತ್ರೆಗೆ ತೆರಳಿ ಜೀವ ಉಳಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ. ಆದರೆ ವಿಚಾರಣೆ ವೇಳೆ ಆತನೇ ಚಾಕುವಿನಲ್ಲಿ ಇರಿದುಕೊಂಡಿದ್ದಾಗಿ ದಂಪತಿ ಹೇಳಿದ್ದಾರೆ. ವೈದ್ಯರ ಪ್ರಕಾರ ಗಾಯದ ಸ್ವರೂಪ ನೋಡಿದರೆ ಆತ್ಮಹತ್ಯೆಯಂತೆ ಕಾಣದೇ ಬಲವಂತವಾಗಿ ಇರಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.