ಬೆಂಗಳೂರು, ಜು 17 (DaijiworldNews/DB): ಕೆರೂರಿನಲ್ಲಿ ಮಾನವೀಯ ದೃಷ್ಟಿಯಿಂದ ನೀಡಿದ ಹಣವನ್ನು ನನ್ನ ಕಾರಿನ ಮೇಲೆ ಎಸೆದ ಮಹಿಳೆಗೆ ತನ್ನ ತಪ್ಪಿನ ಅರಿವಾಗಿದೆ. ಅವರು ನನ್ನ ಬಳಿ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳೆ ಮಾತನಾಡಿರುವ ವೀಡಿಯೊ ಸಮೇತ ಟ್ವೀಟ್ ಮಾಡಿರುವ ಅವರು, ಅವರ ಕುಟುಂಬದ ಮೇಲಾದ ಹಲ್ಲೆಯಿಂದ ಅವರು ನೊಂದಿದ್ದರು. ಆ ಸಮಯದಲ್ಲಿ ಅವರದು ಭಾವುಕ ಪ್ರತಿಕ್ರಿಯೆಯಾಗಿತ್ತು ಎಂಬುದು ನನಗೆ ಅರ್ಥವಾಗುತ್ತದೆ. ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿ ಮಾಡಿ ನನಗೆ ಅವರು ಶುಭ ಹಾರೈಸಿದ್ದಾರೆ. ಆ ಸೋದರಿಗೆ ನನ್ನ ಧನ್ಯವಾದಗಳು. ಅವರಿಗೆ ಅವರ ತಪ್ಪಿನ ಅರಿವಾದ ಮೇಲೆ ನನ್ನ ಬಳಿ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದಿದ್ದಾರೆ.
ಬಾಗಲಕೋಟೆಯ ಕೆರೂರ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಗಲಭೆ ವಿಚಾರ ಗೊತ್ತಾದ ಕೂಡಲೇ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾತನಾಡಿ ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇನೆ. ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ 2 ಲಕ್ಷ ರೂ.ಗಳನ್ನು ಸಂತ್ರಸ್ತರ ಕುಟುಂಬದಲ್ಲೋರ್ವರಾದ ಮಹಿಳೆಯು ಸಿದ್ದರಾಮಯ್ಯ ಅವರ ವಾಹನದ ಮೇಲೆ ಎಸೆದಿದ್ದರು. ಘಟನೆ ನಡೆದು ಹಲವು ದಿನ ಕಳೆದರೂ ಯಾರೂ ಬಂದಿಲ್ಲ. ಈಗ ಸಮಾಧಾನ ಮಾಡುವುದಕ್ಕೆ ಬಂದಿದ್ದೀರಿ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದರು.