ನವದೆಹಲಿ, ಜು 17 (DaijiworldNews/DB): ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಾಳೆ (ಜುಲೈ 18) ನಡೆಯಲಿದೆ. ಸಂಸತ್ ಭವನ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಸೋಮವಾರ ಬೆಳಗ್ಗೆ ಮತದಾನ ಆರಂಭವಾಗಲಿದೆ.
ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಅವರು ರಾಷ್ಟ್ರಪತಿ ಅಭ್ಯರ್ಥಿಗಳಾಗಿ ಚುನಾವಣೆ ಕಣದಲ್ಲಿದ್ದು, ಇವರಿಬ್ಬರಲ್ಲಿ ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬುದು ಸದ್ಯದ ಕುತೂಹಲ. ಚುನಾಯಿತ ಸಂಸದರು, ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ.
ಮತ ಎಣಿಕೆ ಕಾರ್ಯ ಜುಲೈ 21ರಂದು ಸಂಸತ್ ಭವನದಲ್ಲಿ ನಡೆಯಲಿದ್ದು, ಅಂದೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಮೂಲಗಳ ಪ್ರಕಾರ ಅತಿ ಹೆಚ್ಚು ಬೆಂಬಲ ಹೊಂದಿರುವ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವಿನ ಸಾಧ್ಯತೆ ದಟ್ಟವಾಗಿದೆ. ಆದರೆ ಇದಕ್ಕೆ ಉತ್ತರ ಸಿಗಬೇಕಾದರೆ ಜುಲೈ 21ರವರೆಗೂ ಕಾಯಬೇಕಿದೆ.