ಕನೌಜ್ (ಉತ್ತರ ಪ್ರದೇಶ), ಜು 17 (DaijiworldNews/DB): ದುಷ್ಕರ್ಮಿಗಳು ದೇವಸ್ಥಾನದ ಕಂಪೌಂಡ್ನಲ್ಲಿ ಮಾಂಸದ ತುಂಡುಗಳನ್ನು ಎಸೆದ ಘಟನೆಯಿಂದ ಆಕ್ರೋಶಗೊಂಡ ಗುಂಪೊಂದು ದೇವಸ್ಥಾನಕ್ಕೆ ಸನಿಹವಿರುವ ಮೂರು ಮಾಂಸದಂಗಡಿಗಳಿಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.
ತಾಲ್ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲಾಬಾದ್ ಗ್ರಾಮದಲ್ಲಿ ಘಟನೆ ನಡೆದಿದೆ. ದೇವಳದ ಅರ್ಚಕ ಜಗದೀಶ್ ಜಾತವ್ ಅವರು ಬೆಳಗ್ಗೆ ನಾಲ್ಕರ ಸುಮಾರಿಗೆ ದೇವಸ್ಥಾನಕ್ಕೆ ಬಂದಾಗ ಮಾಂಸದ ತುಂಡುಗಳು ಪತ್ತೆಯಾಗಿವೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಕಂಪೌಂಡ್ನ್ನು ಸ್ವಚ್ಛಗೊಳಿಸಿದರು. ಇದಾದ ಬಳಿಕ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಾಲ್ಗ್ರಾಮ್-ಇಂದ್ರಗಢ್ ರಸ್ತೆ ತಡೆ ನಡೆಸಿದರು. ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮದ ಭರವಸೆಯನ್ನು ಪೊಲೀಸರು ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಮಾಂಸದ ತುಂಡು ಎಸೆದ ಅಪರಿಚಿತ ದುಷ್ಕರ್ಮಿಗಳ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ನಡುವೆ ಮಧ್ಯಾಹ್ನ ವೇಳೆಗೆ ಪ್ರತಿಭಟನಾಕಾರರ ಗುಂಪೊಂದು ಮೂರು ಮಾಂಸದಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಿಶ್ರಾ ಹೇಳಿರುವುದಾಗಿ ವರದಿಯಾಗಿದೆ.