ಬೆಂಗಳೂರು, ಜು 17 (DaijiworldNews/DB): ಕೆಲವು ರಾಜಕೀಯ ನಾಯಕರು ಹಾಗೂ ಪ್ರಗತಿಪರ ಚಿಂತಕರಿಗೆ ಕೊಲೆ ಬೆದರಿಕೆ ಹಾಕಿರುವ ಇನ್ನೊಂದು ಪತ್ರ ಮಾಜಿ ಸಚಿವ ಬಿ.ಟಿ. ಲಲಿತಾ ನಾಯಕ್ ನಿವಾಸಕ್ಕೆ ದುಷ್ಕರ್ಮಿಗಳು ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಎರಡು ಬಾರಿ ಇಂತಹ ಬೆದರಿಕೆ ಪತ್ರ ಅವರ ನಿವಾಸಕ್ಕೆ ಬಂದಿತ್ತು.
ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾಯಕರಾದ ಕಪಿಲ್ ಸಿಬಲ್, ಲಲಿತಾ ನಾಯಕ್, ಲೀನಾ, ಮಹುವಾ ಮೊಯಿತ್ರಾ ಸೇರಿದಂತೆ ಹಲವರ ಫೋಟೋಗಳನ್ನು ಬೆದರಿಕೆ ಪತ್ರದಲ್ಲಿ ಅಂಟಿಸಲಾಗಿದೆ. ಇನ್ನು ಕೆಲವರ ಫೋಟೋ ಸಿಗದ ಕಾರಣ ಅಂಟಿಸಲಾಗಿಲ್ಲ ಎಂದೂ ಪತ್ರದಲ್ಲಿ ಬರೆಯಲಾಗಿದೆ ಎಂದು ವರದಿಯಾಗಿದೆ.
ಫೋಟೋದಲ್ಲಿರುವವರು ಅಪ್ಪಟ ದೇಶದ್ರೋಹಿಗಳು. ದೇಶದ ಸೈನಿಕರು, ಪೊಲೀಸರು ಮತ್ತು ನಾಗರಿಕರ ಮೇಲೆ ಇಸ್ಲಾಮಿಕ್ ಮತಾಂಧರು ಮತ್ತು ಭಯೋತ್ಪಾದಕರು ದಾಳಿ ಮಾಡಿದಾಗ ಏನೂ ಮಾತನಾಡದೆ ಮೌನ ವಹಿಸುತ್ತಾರೆ. ಪಠ್ಯ ಪುಸ್ತಕದಲ್ಲಿ ದೇಶ ಪ್ರೇಮ, ದೇಶ ಭಕ್ತಿ ಹಾಗೂ ನಾಡಭಕ್ತಿ ಪಾಠ ಸೇರಿಸಿದರೆ ಇವರಿಗೆ ಉರಿಯಾಗುತ್ತದೆ. ದುರುಳ, ದುರ್ಬುದ್ದಿಯುಳ್ಳವರು ಮುಂದೆ ದುರ್ಮರಣಕ್ಕೀಡಾಗುತ್ತಾರೆ ಎಂದು ಬೆದರಿಕೆ ಸಂದೇಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಈ ಪತ್ರ ಶನಿವಾರ ಸಂಜೆ ಲಲಿತಾ ನಾಯಕ್ ನಿವಾಸಕ್ಕೆ ಬಂದಿದೆ. ಈ ಹಿಂದೆ ಜುಲೈ 3 ಹಾಗೂ ಜುಲೈ 7ರಂದು ಇದೇ ಮಾದರಿಯ ಬೆದರಿಕೆ ಪತ್ರ ಅವರ ನಿವಾಸಕ್ಕೆ ಬಂದಿತ್ತು.
ಪತ್ರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಲಲಿತಾ ನಾಯಕ್, ಮೇಲಿಂದ ಮೇಲೆ ಬೆದರಿಕೆ ಪತ್ರ ಬರುತ್ತಿರುವ ಬಗ್ಗೆ ತಿಳಿಸಿದರೂ ಸರ್ಕಾರ ಪತ್ರ ಬರೆದ ವ್ಯಕ್ತಿಯನ್ನು ಬಂಧಿಸುವಲ್ಲಿ ವಿಫಲವಾಗಿದೆ. ಇದು ಆತಂಕವನ್ನು ಹೆಚ್ಚಿಸುತ್ತಿದ್ದರೂ, ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.