ನವದೆಹಲಿ, ಜು 17 (DaijiworldNews/DB): ಯೋಧನೊಬ್ಬ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಸೇನಾನೆಲೆಯಲ್ಲಿ ಶನಿವಾರ ನಡೆದಿದೆ.
ಇಂಡೊ-ಟಿಬೆಟ್ ಗಡಿ ಪೊಲೀಸ್ನ (ಐಟಿಬಿಪಿ) ಕಾನ್ಸ್ಟೆಬಲ್ ಭೂಪೇಂದ್ರ ಸಿಂಗ್ ಕೃತ್ಯ ಎಸಗಿ ಮೃತಪಟ್ಟವರು. ಗುಂಡೇಟು ತಿಂದ ಮುಖ್ಯ ಕಾನ್ಸ್ಟೆಬಲ್ ಮತ್ತು ಇತರ ಇಬ್ಬರು ಕಾನ್ಸ್ಟೆಬಲ್ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ದೇವಿಕಾ ಘಾಟ್ ಸಮುದಾಯ ಕೇಂದ್ರದಲ್ಲಿ ಮಧ್ಯಾಹ್ನ 3.30ಕ್ಕೆಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಭೂಪೇಂದ್ರ ಅವರು ತಮ್ಮ ಐಎನ್ಎಸ್ಎಎಸ್ ಬಂದೂಕಿನಿಂದ ಮೂವರ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟರು. ಘಟನೆಗೂ ಮೊದಲು ಇವರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಕೆಲವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಶುಕ್ರವಾರ ಇದೇ ಮಾದರಿಯ ಘಟನೆ ನಡೆದಿತ್ತು. ಯೋಧರೊಬ್ಬರು ತಮ್ಮ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ತಾವೂ ಗುಂಡು ಹೊಡೆದುಕೊಂಡಿದ್ದರು. ಈ ಘಟನೆಯಲ್ಲಿ ಗುಂಡು ಹಾರಿಸಿದ ಯೋಧ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.