ಬೆಂಗಳೂರು, ಜು 16 (DaijiworldNews/DB): ಬೇರೊಬ್ಬನೊಂದಿಗೆ ಬೆಂಗಳೂರಿಗೆ ತೆರಳಿರುವ ಪತ್ನಿಯನ್ನು ಹುಡುಕಿಕೊಡಿ ಎಂದು ದೆಹಲಿಯ ವ್ಯಕ್ತಿಯೊಬ್ಬ ಬೆಂಗಳೂರು ಪೊಲೀಸರಿಗೆ ಟ್ವೀಟ್ ಮೂಲಕ ಮನವಿ ಮಾಡಿದ ಘಟನೆ ನಡೆದಿದೆ.
ದೆಹಲಿ ಮೂಲದ ಅರವಿಂದ್ ಎಂಬುವವರು ಟ್ವೀಟ್ ಮಾಡಿ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಟ್ವೀಟ್ನಲ್ಲಿ ನನ್ನ ಪತಿ ಬೇರೊಬ್ಬನೊಂದಿಗೆ ದೆಹಲಿ ಬಿಟ್ಟು ಬೆಂಗಳೂರಿಗೆ ಹೋಗಿದ್ದಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ಅವಳು ಹೋಗಿದ್ದಾಳೆ. ಬಲವಂತವಾಗಿ ಆಕೆಯನ್ನು ಕರೆದೊಯ್ಯಲಾಗಿದೆ. ದಯವಿಟ್ಟು ನನ್ನ ಪತ್ನಿಯನ್ನು ಹುಡುಕಿಕೊಡಿ ಎಂದು ಒತ್ತಾಯಿಸಿದ್ದಾರೆ.
ತಾವು ಪತ್ನಿ ಮತ್ತು ಮಗುವಿನ ಜೊತೆಗಿರುವ ಫೋಟೋ ಹಾಗೂ ಪತ್ನಿಯನ್ನು ಕರೆದೊಯ್ದಾತನ ಫೋಟೋವನ್ನು ಕೂಡಾ ಟ್ವೀಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರುವ ಬೆಂಗಳೂರು ಪೊಲೀಸರು ನಿಮ್ಮ ಸನಿಹದ ಪೊಲೀಸ್ ಠಾಣೆಗೆ ವಿವರಗಳೊಂದಿಗೆ ದೂರು ನೀಡಿ. ಅದರಿಂದ ನಿಮಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.