ವಿಜಯಪುರ, ಜು 16 (DaijiworldNews/DB): ದೇಶದ ಮಾಜಿ ಉಪ ರಾಷ್ಟ್ರಪತಿ ಐಎಸ್ಐ ಏಜೆಂಟ್ನೊಂದಿಗೆ ನಂಟು ಹೊಂದಿರುವುದು ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ತೀರಾ ಆತಂಕಕಾರಿಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪ ರಾಷ್ಟ್ರಪತಿಯವರಿಗೆ ಐಎಸ್ಐ ಏಜೆಂಟ್ ಜೊತೆಗೆ ನಂಟಿರುವುದು ಸಾಕ್ಷಿ ಸಮೇತ ಬಹಿರಂಗಗೊಂಡಿದೆ. ಇದರ ಹಿಂದಿರುವ ಇತರ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಯಾವೆಲ್ಲ ಎಂಬುದೂ ಬಯಲಾಗುತ್ತದೆ ಎಂದರು.
2047ಕ್ಕೆ ಭಾರತವನ್ನು ಸಂಪೂರ್ಣ ಇಸ್ಲಾಮೀಕರಣ ಮಾಡುವ ಷಡ್ಯಂತ್ರ ನಡೆಸಿದ್ದ ಸಂಘಟನೆಗಳ ಪಿತೂರಿ ಬಯಲಾಗಿದೆ. ಮುಂದೆ ಈ ಕುರಿತು ಇನ್ನಷ್ಟು ಸಾಕ್ಷಿಗಳು ಸಿಗಲಿವೆ. ಆನಂತರಎಸ್ಡಿಪಿಐ, ಪಿಎಫ್ಐ, ಪಿಡಿಎಫ್ ಮುಂತಾದ ದೇಶದ್ರೋಹಿ ಸಂಘಟನೆಗಳ ನಿಷೇಧ ಖಂಡಿತಾ ಎಂದವರು ತಿಳಿಸಿದರು.
ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಿ ಯುವಕರಲ್ಲಿ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಮತ್ತು ದೇಶಪ್ರೇಮಿ ಯುವ ಪಡೆ ಕಟ್ಟವ ನಿಟ್ಟಿನಲ್ಲಿ ಅಗ್ನಿಪಥ ಯೋಜನೆ ತುಂಬಾ ಪ್ರಯೋಜನಕಾರಿ. ಭವಿಷ್ಯ ಭಾರತದ ಉಳಿವಿಗೆ ಇದು ಶ್ರೇಷ್ಠ ಯೋಜನೆ ಎಂದವರು ಅಭಿಪ್ರಾಯಪಟ್ಟರು.