ಮುಂಬೈ, ಜು 16 (DaijiworldNews/DB): ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿಯವರನ್ನು ಸಿಲುಕಿಸಲು ನಡೆದ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಆರೋಪ ಮಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ದಿ. ಅಹ್ಮದ್ ಪಟೇಲ್ ಅವರು ಆಗ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದರು. ಗುಜರಾತ್ನಲ್ಲಿ ಮೋದಿಯವರ ರಾಜಕೀಯ ವೃತ್ತಿ ಜೀವನ ಹಾಳುಗೆಡಹುವ ಮತ್ತು ಬಿಜೆಪಿಯನ್ನು ಅಸ್ಥಿತಗೊಳಿಸುವ ಉದ್ದೇಶದಿಂದ ಪ್ರಕರಣದಲ್ಲಿ ಮೋದಿಯವರನ್ನು ಸಿಲುಕಿಸಲು ಸಂಚು ರೂಪಿಸಿದ್ದರು. ಸೋನಿಯಾ ಗಾಂಧಿಯವರು ಇದಕ್ಕೆ ಪ್ರೇರಣೆ ನೀಡಿದ್ದರು ಎಂದರು.
ಈಗಾಗಲೇ ಎಸ್ಐಟಿಯು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಪಿತೂರಿಯಲ್ಲಿ ಸೋನಿಯಾ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಅಂಶವನ್ನು ಉಲ್ಲೇಖಿಸಿದೆ ಎಂದವರು ತಿಳಿಸಿದರು.