ಚಂಡೀಘಡ್, ಜು 16 (DaijiworldNews/DB): ಹತ್ತು ವರ್ಷದ ಹಿಂದೆ ಮಗಳನ್ನು ಕೊಂದ ತಾಯಿಯೊಬ್ಬಳು ಇದೀಗ ನಾಲ್ಕು ವರ್ಷದ ಮಗನನ್ನೂ ಕೊಂದಿರುವ ಆಘಾತಕಾರಿ ಘಟನೆ ಚಂಡೀಘಡ್ನಲ್ಲಿ ನಡೆದಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಬಬಿತಾ (45) ಬಂಧಿತ ಮಹಿಳೆ. ಮುಲ್ಲನ್ಪುರ ದಖಾದ ಭನೋಹರ್ ಗ್ರಾಮದಲ್ಲಿ ನಾಲ್ಕು ವರ್ಷದ ಮಗು ನಾಪತ್ತೆಯಾಗಿತ್ತು. ಮನೆ ಹೊರಗೆ ಆಡುತ್ತಿದ್ದ ಮಗು ನಾಪತ್ತೆಯಾಗಿದೆ ಎಂದು ತಾಯಿ ಹೇಳಿಕೊಂಡಿದ್ದಳು. ಬಳಿಕ ಮಗುವಿನ ತಂದೆ ಶಾಮ್ ಲಾಲ್ ಗ್ರಾಮಸ್ಥರೊಂದಿಗೆ ಸೇರಿ ಮಗುವಿನ ಹುಡುಕಾಟ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗುವಿನ ತಾಯಿ ಬಬಿತಾ ಗೋಣಿ ಚೀಲವನ್ನು ತನ್ನ ತಲೆಯಲ್ಲಿ ಹೊತ್ತೊಯ್ಯುತ್ತಿರುವುದು ಗೊತ್ತಾಗಿತ್ತು. ಹೀಗಾಗಿ ಕೂಡಲೇ ಪತ್ನಿಯ ವಿರುದ್ದ ಪತಿ ಪೊಲೀಸರಿಗೆ ದೂರು ನೀಡಿದರು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕತ್ತು ಹಿಸುಕಿ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊಲೆ ಮಾಡಿ ಶವವನ್ನು ಗೋಣಿ ಚೀಲದಲ್ಲಿ ಕಟ್ಟಿ ಕೊಳಕ್ಕೆ ಎಸೆದಿದ್ದಳು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್ಪೆಕ್ಟರ್ ಸುಖಜೀಂದರ್ ಸಿಂಗ್ ತಿಳಿಸಿರುವುದಾಗಿ ವರದಿಯಾಗಿದೆ.
ಹತ್ತು ವರ್ಷದ ಹಿಂದೆ ಆರು ವರ್ಷದ ಮಗಳನ್ನೂ ಈಕೆ ಕೊಂದಿದ್ದಳು. ಎರಡು ಬಾರಿ ಗರ್ಭಧಾರಣೆಯಾಗಿದ್ದ ವೇಳೆ ಹೊಟ್ಟೆಗೆ ಗಟ್ಟಿಯಾದ ವಸ್ತುವಿನಿಂದ ಹೊಡೆದು ಗರ್ಭಪಾತ ಮಾಡಿಕೊಂಡಿದ್ದಳು ಎಂದೂ ಈ ವೇಳೆ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.
ಮಹಿಳೆ ಮಾನಸಿಕವಾಗಿ ಅಸ್ವಸ್ಥತೆ ಹೊಂದಿದ್ದಳು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿದು ಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಗಳು ಕಣ್ಮರೆಯಾಗುವಂತೆ) ಅಡಿಯಲ್ಲಿ ಮಹಿಳೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.