ಬೆಂಗಳೂರು, ಜು 16 (DaijiworldNews/DB): ದೇಶ ಸೇವೆಗೈಯುವ ಸೈನಿಕರನ್ನು ಕಂಡಾಗ ಯಾರಿಗಾದರೂ ಗೌರವ ಭಾವನೆ ಮೂಡುತ್ತದೆ. ಆದರೆ ಪುಟ್ಟ ಬಾಲಕಿಯೊಬ್ಬಳು ಯೋಧರ ಬಳಿ ತೆರಳಿ ಕಾಲಿಗೆ ನಮಸ್ಕರಿಸಿ ಗೌರವಿಸುವ ಫೋಟೋ, ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಭಾರತ ಮಾತೆಯ ಸೇವೆಯನ್ನೇ ಜೀವನವೆಂದು ಬದುಕುತ್ತಿರುವ ಯೋಧರನ್ನು ಕಂಡಾಗ ಪ್ರತಿಯೊಬ್ಬರಿಗೂ ಗೌರವ ಭಾವನೆ ಉಕ್ಕಿ ಬರುತ್ತದೆ. ಸೈನಿಕರ ಬಗ್ಗೆ ಹಿರಿ-ಕಿರಿಯರೆನ್ನದೆ ಎಲ್ಲರಿಗೂ ಗೌರವ, ಪ್ರೀತಿ. ಆದರೆ ಏನೂ ಅರಿಯದ ಪುಟ್ಟ ಬಾಲಕಿಯೊಬ್ಬಳು ಯೋಧರ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸುವ ಮೂಲಕ ದೇಶಸೇವಕರಿಗೆ ಸಲ್ಲಿಸಿದ ಗೌರವ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. ಮನೆಯಲ್ಲಿ ಸಿಕ್ಕ ಸಂಸ್ಕಾರದ ಫಲ ಇದು ಎಂಬುದಾಗಿ ನೆಟ್ಟಿಗರು ಬಾಲಕಿಯ ನಡೆಯನ್ನು ಕೊಂಡಾಡಿದ್ದಾರೆ.
ಕಪ್ಪು ಬಣ್ಣದ ಉಡುಪು ತೊಟ್ಟಿರುವ ಬಾಲಕಿ ಸೈನಿಕರನ್ನು ಕಂಡೊಡನೆ ಪುಟಾಣಿ ಹೆಜ್ಜೆ ಇಟ್ಟು ಅವರ ಬಳಿಗೆ ಓಡಿ ಹೋಗಿ ನಿಲ್ಲುತ್ತಾಳೆ. ಆಗ ಅಲ್ಲೇ ಇದ್ದ ಸೈನಿಕರೊಬ್ಬರು ಮಗುವನ್ನು ಮಾತನಾಡಿಸುತ್ತಾರೆ. ಸೈನಿಕರ ಮುಖವನ್ನೇ ನೋಡುತ್ತಾ ನಿಂತ ಬಾಲಕಿ ಬಳಿಕ ಅವರ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸುತ್ತಾಳೆ. ಬಾಲಕಿಯ ಸೈನಿಕಪ್ರೇಮದ ಅಂತರಂಗಕ್ಕೆ ದೇಶಾದ್ಯಂತ ಹಲವರು ಮೆಚ್ಚಿದ್ದಾರೆ.