ಬೆಂಗಳೂರು, ಜು 16 (DaijiworldNews/DB): ಅಪ್ರಾಪ್ತೆಯನ್ನು ಮದುವೆಯಾಗಲು ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕ ಮಾಹಿತಿ ತಿದ್ದಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಮನು ಬಂಧಿತ ಆರೋಪಿ. ಈತ ಅಪ್ರಾಪ್ತೆ ಹುಡುಗಿ ಜೊತೆ ಮದುವೆಯಾಗಿದ್ದ. ಆದರೆ ಆಕೆ ಅಪ್ರಾಪ್ತೆ ಎಂದು ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕಾಗಿ 2005ರಲ್ಲಿ ಹುಟ್ಟಿದ ಆಕೆಯ ಜನ್ಮ ಇಸವಿಯನ್ನು ತಿದ್ದಿದ್ದಾನೆ. ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಲು ತೆರಳಿದ್ದ ವೇಳೆ ಈತ ಜನ್ಮ ಇಸವಿ ತಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸದ್ಯ ಯುವಕನ ವಿಚಾರಣೆ ನಡೆಯುತ್ತಿದ್ದು, ಪೊಲೀಸರು ಆಧಾರ್ ಕಾರ್ಡ್ ತಿದ್ದಲು ಸಹಾಯ ಮಾಡಿದವರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.