ಬೆಂಗಳೂರು, ಜು 16 (DaijiworldNews/DB): ಸಿದ್ದರಾಮೋತ್ಸವ ವಿಚಾರವಾಗಿ ನನಗೇನು ಗೊತ್ತಿಲ್ಲ. ಯಾರನ್ನು ಕೇಳಬೇಕೋ ಅವರನ್ನೇ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಗಾಂಧಿಯವರು ನೀಡಿದ್ದಾರೆ. ನನಗೆ ಇತಿ ಮಿತಿ ಎಂಬುದಿದೆ. ನನ್ನೊಂದಿಗೆ ಸಿದ್ದರಾಮೋತ್ಸವ ವಿಚಾರವಾಗಿ ಕೇಳಬೇಡಿ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆಯಿಂದಾಗಿ ಹಲವರಿಗೆ ಬೇಸರ ಉಂಟಾಗಿದೆ. ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಕಮಿಷನ್ ಬಗ್ಗೆ ಮಠಾಧೀಶರು ಮಾತನಾಡಿದರೂ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಮಾಜಿ ಸಿಎಂ ಮಗ ಕೂಡಾ ಇದರಲ್ಲಿದ್ದಾರೆಂದು ಶಾಸಕರೂ ಹೇಳಿದ್ದಾರೆ. ಇದು ನಿಜವೇ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಯಾವ ಹುದ್ದೆಗೆ ಎಷ್ಟು ಹಣ ಎಂಬುದಾಗಿ ಹೊಟೇಲ್ ಮೆನು ರೀತಿಯಲ್ಲಿ ಪಟ್ಟಿ ಮಾಡಲಾಗುತ್ತಿದೆ. ಬಂಧಿತ ಅಮೃತ್ ಪೌಲ್ ಅವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿ ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ವಿಚಾರಿಸಲಿ ಎಂದವರು ಇದೇ ವೇಳೆ ಆಗ್ರಹಿಸಿದರು.