ಬೆಂಗಳೂರು, ಜು 16 (DaijiworldNews/DB): ಮೊಬೈಲ್ನಲ್ಲಿ ಮಾತನಾಡಿದ ಪತ್ನಿ ಮೇಲೆ ಅನುಮಾನಗೊಂಡ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ.
ಪ್ರೇಮ (25) ಕೊಲೆಯಾದ ಮಹಿಳೆ. ಆಕೆಯ ಪತಿ ವೆಂಕಟೇಶಾಚಾರಿ ಹತ್ಯೆಗೈದಾತ. ಪ್ರೇಮಾ ಹಾಗೂ ವೆಂಕಟೇಶಾಚಾರಿ ಒಂಬತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಏಳು ವರ್ಷದ ಮಗಳಿದ್ದಾಳೆ. ಪತ್ನಿ ಮೊಬೈಲ್ನಲ್ಲಿ ಮಾತನಾಡುವುದನ್ನು ಅನುಮಾನದಿಂದ ಕಂಡ ಈತ ರಾತ್ರಿ ವೇಳೆ ಪತ್ನಿ ಮಲಗಿದ್ದಾಗ ಕತ್ತು, ಕೈಗಳನ್ನು ಮಚ್ಚಿನಿಂದ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆನೇಕಲ್ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.