ನವದೆಹಲಿ, ಜು 16 (DaijiworldNews/DB): ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಹಣಕಾಸಿನ ನೆರವು ಒದಗಿಸಿರುವುದಾಗಿ ಮತ್ತು ಗುಜರಾತ್ನ ಆಗಿನ ಸಿಎಂ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲು ಸಂಚು ರೂಪಿಸಿದ್ದರು ಎಂಬುದಾಗಿ ಅಹ್ಮದ್ ಪಟೇಲ್ ಮೇಲೆ ಗುಜರಾತ್ ಪೊಲೀಸ್ ಎಸ್ಐಟಿ ಮಾಡಿರುವ ಆರೋಪವನ್ನು ಕಾಂಗ್ರೆಸ್ ಶನಿವಾರ ತಳ್ಳಿ ಹಾಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಈ ಆರೋಪ ಕಪೋಲಕಲ್ಪಿತವಾಗಿದ್ದು, ದುರುದ್ದೇಶದಿಂದ ಕೂಡಿದೆ ಎಂದು ಆಪಾದಿಸಿದೆ. ಇಂತಹ ಆರೋಪಗಳು ಪ್ರಧಾನಿಯವರ ರಾಜಕೀಯ ಸೇಡಿನ ತಂತ್ರ. ಅವರಿಗೆ ರಾಜಕೀಯವಾಗಿ ವಿರೋಧಿಗಳಾದವರು ಅಗಲಿದರೂ ಅವರು ಸೇಡು ಬಿಡುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿ ಕಾರಿದ್ದಾರೆ.
ಎಸ್ಐಟಿಯು ರಾಜಕೀಯ ಮಾಸ್ಟರ್ ಹೇಳಿದಂತೆಯೇ ಕುಣಿಯುತ್ತದೆ. ಅವರು ಹೇಳಿದಂತೆಯೇ ಕೇಳುತ್ತದೆ. ಹಿಂದಿನ ಎಸ್ಐಟಿ ಮುಖ್ಯಸ್ಥರು ಮುಖ್ಯಮಂತ್ರಿಗೆ ಕ್ಲೀನ್ಚಿಟ್ ಕೊಟ್ಟ ಕೂಡಲೇ ರಾಜತಾಂತ್ರಿಕ ಹುದ್ದೆಯ ಬಹುಮಾನ ಪಡೆದಿರುವುದು ನಮಗೆ ಗೊತ್ತಿಲ್ಲದ ವಿಷಯವೇನಲ್ಲ ಎಂದು ಇದೇ ವೇಳೆ ಜೈ ರಾಮ್ ರಮೇಶ್ ಹೇಳಿದ್ದಾರೆ.