ನವದೆಹಲಿ, ಜು 16 (DaijiworldNews/DB): ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನಿವಾಸಕ್ಕೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸುದೀಪ್ ಭೇಟಿ ಬಗ್ಗೆ ಸ್ವತಃ ಪ್ರಹ್ಲಾದ್ ಜೋಶಿಯವರೇ ಟ್ವೀಟ್ ಮಾಡಿದ್ದಾರೆ. ಕನ್ನಡ ಚಿತ್ರನಟ ಸುದೀಪ್ ಅವರು ನನ್ನ ನಿವಾಸಕ್ಕೆ ಭೇಟಿ ನೀಡಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಇದು 13 ವರ್ಷಗಳ ಬಳಿಕ ಅವರ ಭೇಟಿಯಾಗಿದೆ. ಕಲೆ, ಸಂಸ್ಕೃತಿ, ಸಾಮಾಜಿಕ ಚಟುವಟಿಕೆಗಳ ಕುರಿತು ಅವರು ಮಾತನಾಡಿದರು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸಿನಿಮಾ ಕ್ಷೇತ್ರದಲ್ಲಿ ಅವರು ಇನ್ನಷ್ಟು ಎತ್ತರಕ್ಕೇರಲಿ ಎಂದು ಇದೇ ವೇಳೆ ಹಾರೈಸಿದ್ದಾರೆ.
ಸುದೀಪ್ ಅವರು ಜೋಶಿ ಮನೆಯಲ್ಲಿ ಉಪಾಹಾರ ಸೇವಿಸಿ ಮಾತುಕತೆ ನಡೆಸಿದ್ದಾರೆ. ಸುದೀಪ್ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜೋಶಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.