ಬೆಂಗಳೂರು, ಜು 16 (DaijiworldNews/DB): ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ನಗರದ ಖಾಸಗಿ ಹೊಟೇಲ್ನಲ್ಲಿ ವಾಸ್ತವ್ಯ ಹೂಡುವಂತೆ 122 ಶಾಸಕರು ಮತ್ತು 25 ಸಂಸದರಿಗೆ ಬಿಜೆಪಿ ಆದೇಶಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಬಿಜೆಪಿ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ, ಜುಲೈ 18ರಂದು ನಡೆಯುವ ಚುನಾವಣೆವರೆಗೆ ಹೊಟೇಲ್ನಲ್ಲಿರಬೇಕು. ಶನಿವಾರವೇ ಹೋಟೆಲ್ ಗೆ ಬರುವಂತೆ ಸೂಚಿಸಿದ್ದಾರೆ.
ಚುನಾವಣೆಯಲ್ಲಿ ಮತದಾನ ಮಾಡುವ ವಿಧಾನದ ಕುರಿತು ಶಾಸಕರು, ಸಂಸದರು ತಂಗುವ ಹೊಟೇಲ್ನಲ್ಲಿಯೇ ಅಣುಕು ಪ್ರದರ್ಶನ ಭಾನುವಾರ ನಡೆಯಲಿದೆ. ಮೂವರು ನಾಯಕರಿಗೆ ದೆಹಲಿಯಲ್ಲಿ ಈ ಸಂಬಂಧ ತರಬೇತಿಯನ್ನೂ ನೀಡಲಾಗಿದೆ ಎನ್ನಲಾಗಿದೆ.
ಈ ನಡುವೆ ಶಾಸಕರು, ಸಂಸದರನ್ನು ಹೊಟೇಲ್ನಲ್ಲಿ ತಂಗುವಂತೆ ಹೇಳಿರುವುದಕ್ಕೆ ಪಕ್ಷದೊಳಗೇ ಅಸಮಾಧಾನವೂ ವ್ಯಕ್ತವಾಗಿದೆ ಎನ್ನಲಾಗಿದೆ. ರಾಷ್ಟ್ರಪತಿ ಚುನಾವಣೆ ವಿಪ್ ಜಾರಿ ಮಾಡುವಂತಿಲ್ಲ. ದ್ರೌಪದಿ ಮುರ್ಮು ಅವರಿಗೇ ಮತ ಹಾಕುತ್ತೇವೆ. ಅದಕ್ಕಾಗಿ ಅಣುಕು ಮತದಾನವಾಗಲೀ, ಹೊಟೇಲ್ ವಾಸ್ತವ್ಯವಾಗಲೀ ಅಗತ್ಯವಿಲ್ಲ ಎಂದು ಶಾಸಕರೊಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ.