ಮುಂಬೈ, ಜು 16 (DaijiworldNews/DB): ರಾಜ್ಯದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ 50 ಶಾಸಕರ ಪೈಕಿ ಯಾರೇ ಒಬ್ಬರು ಸೋತರೂ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಶಾಸಕರ ಗುಂಪಿನಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತನ್ನನ್ನು ಬೆಂಬಲಿಸಲು ಈ 50 ಶಾಸಕರು ತುಂಬಾ ಸವಾಲನ್ನೆದುರಿಸಿದರು. ಶಾಸಕರ ಆಗುಹೋಗುಗಳ ಬಗ್ಗೆ ಗಮನ ಹರಿಸಿ ಅವುಗಳ ಪರಿಹಾರಕ್ಕೆ ಒತ್ತು ನೀಡುವುದು ನನ್ನ ಆದ್ಯ ಕರ್ತವ್ಯ. ಉದ್ದವ್ ಠಾಕ್ರೆ ವಿರುದ್ದ ಎಲ್ಲರೂ ಸೋಲುತ್ತಾರೆಂಬುದಾಗಿ ಅವರು ಹೇಳುತ್ತಾರೆ. ಆದರೆ ಯಾರೊಬ್ಬರೂ ಮುಂದಿನ ಚುನಾವಣೆಯಲ್ಲಿ ಸೋಲಬಾರದು. ಯಾರೇ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುತ್ತೇನೆ ಎಂದರು.
ಸೂರತ್, ಗುವಾಹಟಿಯಲ್ಲಿದ್ದಾಗಿನ ದಿನಗಳು ನಿರ್ಣಾಯಕವಾಗಿತ್ತು. ಅಲ್ಲಿದ್ದಷ್ಟು ದಿನ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ನನ್ನ ಭವಿಷ್ಯದ ಬದಲಾಗಿ ನನ್ನೊಂದಿಗೆ ಬಂದ ಶಾಸಕರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೆ. ಆದರೆ ಅವರು ನನ್ನ ನಾಯಕತ್ವದಲ್ಲಿ ವಿಶ್ವಾಸವಿಟ್ಟಿದ್ದರು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ನಿರ್ಧಾರವನ್ನು ಜನ ಸ್ವಾಗತಿಸಿದ್ದಾರೆ ಎಂದವರು ತಿಳಿಸಿದರು.
ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಸೇನಾ ಶಾಸಕರಿಗೆ ಯಾವುದೇ ಗೌರವ ಇರಲಿಲ್ಲ. ಎನ್ಸಿಪಿ ಶಾಸಕರಿಗೆ ಅನುದಾನ ಬಿಡುಗಡೆಗೊಳಿಸಿದರೆ, ಸೇನಾ ಶಾಸಕರಿಗೆ ತಾರತಮ್ಯ ಎಸಗಲಾಗುತ್ತಿತ್ತು ಎಂದು ಇದೇ ವೇಳೆ ಆಪಾದಿಸಿದರು.