ಪಟ್ನಾ, ಜು 16 (DaijiworldNews/DB): ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ಬಿಹಾರದ ಪುಲ್ವಾರಿ ಷರೀಫ್ ಪ್ರದೇಶದಲ್ಲಿ ಬಂಧಿತರಾದ ಆರೋಪಿಗಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ನಂಟಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಬಿಹಾರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿ ಜಲಾಲುದ್ದೀನ್, ಸಿಮಿ ಸಂಘಟನೆಯ ಅಥರ್ ಪರ್ವೇಜ್, ಶಮೀಮ್ ಅಖ್ತರ್, ಅರ್ಮಾನ್ ಮಲಿಕ್, ತಾಹೀರ್ ಅಹ್ಮದ್ ಮತ್ತು ಶಬ್ಬೀರ್ ಮಲಿಕ್ ನನ್ನು ಬಂಧಿಸಿದ್ದರು. ಈ ಪೈಕಿ ಮರ್ಗೂವ್ ಅಹ್ಮದ್ ಡ್ಯಾನಿಶ್ ಅಲಿಯಾಸ್ ತಾಹೀರ್ ಎಂಬಾತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಯುವಕರೊಂದಿಗೆ ಸಂಪರ್ಕ ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ.
ಈತ ಕಳೆದ ಆರು ವರ್ಷಗಳಿಂದ ಅಂತರ್ಜಾಲ ಮಾಧ್ಯಮಗಳ ಮುಖಾಂತರ ಪಾಕ್ ಮತ್ತು ಬಾಂಗ್ಲಾ ಯುವಕರೊಂದಿಗೆ ಸಂಪರ್ಕದಲ್ಲಿದ್ದ. ಅಲ್ಲದೆ, ಸಂಪರ್ಕ ಸಾಧಿಸುವುದಕ್ಕಾಗಿ 'ಗಜ್ವಾ-ಇ-ಹಿಂದ್' ಎಂಬ ವಾಟ್ಸಾಪ್ ಗ್ರೂಪ್ ಕೂಡಾ ರಚಿಸಿಕೊಂಡಿದ್ದರು. ಪ್ರಚೋದನಕಾರಿ ಆಡಿಯೋ, ವೀಡಿಯೋಗಳನ್ನು ರವಾನಿಸುವುದು ಈ ಗ್ರೂಪ್ನ ಉದ್ದೇಶವಾಗಿತ್ತು ಎಂದು ಪಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮಾನವಜೀತ್ ಸಿಂಗ್ ಧಿಲ್ಲೋನ್ ತಿಳಿಸಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನದ 'ತಹ್ರೀಕ್-ಇ-ಲಾಬೈಕ್', ಹಾಗೂ ಪಾಕ್ ಪ್ರಜೆ ಫೈಜಾನ್ ಎಂಬಾತನೊಂದಿಗೂ ಆರೋಪಿಗಳು ಸಂಪರ್ಕದಲ್ಲಿದ್ದುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ಮಂದಿ ವಿರುದ್ಧ ಪಟ್ನಾ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಏಳು ಮಂದಿಯ ಬಂಧನ ಆಗಿದೆ.