ಚಿಕ್ಕಮಗಳೂರು, ಜು 16 (DaijiworldNews/MS): ಮೂಡಿಗೆರೆ ತಾಲೂಕು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಆರೋಪಿ ಎನ್ನಲಾಗಿದ್ದ ದಲಿತ ಯುವಕ ಪುನೀತ್ಗೆ ವಿಚಾರಣೆ ವೇಳೆ ಮೂತ್ರ ಕುಡಿಸಿ ಹಿಂಸೆ ನೀಡಿದ್ದರು ಎಂದು ಆರೋಪಿಸಿ ರಾಜ್ಯಾದ್ಯಂತ ಸಂಚಲನ ಮೂಡಿಸಿ ಸುದ್ದಿಯಾಗಿದ್ದ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ವಿಚಾರಣೆಗೆಂದು ಕರೆತಂದು ೨೦೨೧ರ ಮೇ. 10ರಂದು ಯುವಕನಿಗೆ ಮೂತ್ರ ಕುಡಿಸಿ ನೆಲದ ಮೇಲೆ ಬಿದ್ದ ಮೂತ್ರ ನೆಕ್ಕಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಪ್ರಕರಣ ಸಂಬಂಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮೂತ್ರ ಕುಡಿಸಿದ ಆರೋಪದಡಿ ಪಿ.ಎಸ್.ಐ. ಅರ್ಜುನ್ ಮೇಲೂ ಕೇಸ್ ದಾಖಲಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಅರ್ಜುನ್ ಹಾಗೂ ದೂರುದಾರ ಕಿರಗುಂದ ಗ್ರಾಮದ ಪುನೀತ್ ರಾಜಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ