ಬೆಂಗಳೂರು, ಜು 16 (DaijiworldNews/DB): ಸರ್ಕಾರಿ ಇಲಾಖೆಗಳ ಕಚೇರಿ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವೀಡಿಯೋ ತೆಗೆಯುವಂತಿಲ್ಲ ಎಂಬ ಆದೇಶವನ್ನು ಬೊಮ್ಮಾಯಿ ಸರ್ಕಾರ ಶುಕ್ರವಾರ ತಡರಾತ್ರಿ ಹಿಂತೆಗೆದುಕೊಂಡಿದೆ. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ವಾಪಾಸ್ ಪಡೆಯಲಾಗಿದೆ.
ಸರ್ಕಾರಿ ಇಲಾಖೆಗಳ ಕಚೇರಿ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ವೀಡಿಯೋ, ಫೋಟೋ ತೆಗೆಯುವುದರಿಂದ ನೌಕರರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳು ಫೋಟೋ/ವೀಡಿಯೋ ತೆಗೆಯುವಂತಿಲ್ಲ ಎಂಬುದಾಗಿ ಶುಕ್ರವಾರ ಮಧ್ಯಾಹ್ನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಆದೇಶ ಹೊರ ಬರುತ್ತಿದ್ದಂತೆ ವಿಪಕ್ಷಗಳು ಮಾತ್ರವಲ್ಲದೆ ಸ್ವಪಕ್ಷೀಯರಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡುವಂತಹ ಆದೇಶ ಇದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಇಂತಹ ಆದೇಶದಿಂದ ಇಲಾಖೆಗಳ ಪಾರದರ್ಶಕ ಸೇವೆಗೆ ಚ್ಯುತಿ ಬರುತ್ತದೆ ಎಂದು ಬರೆದುಕೊಂಡಿದ್ದರು.
ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸರ್ಕಾರ ಅದನ್ನು ಮರೆ ಮಾಚಲು ಈ ಆದೇಶ ತಂದಿದೆ ಎಂಬುದಾಗಿ ವಿಪಕ್ಷಗಳು ಕಿಡಿ ಕಾರಿದವು. ಸಾರ್ವಜನಿಕ ವಲಯ ಹಾಗೂ ವಿಪಕ್ಷ ಮತ್ತು ಸ್ವಪಕ್ಷೀಯರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಿಗೇ ತಡರಾತ್ರಿಯೇ ಬೊಮ್ಮಾಯಿ ಸರ್ಕಾರ ಈ ಆದೇಶವನ್ನು ಹಿಂಪಡೆದುಕೊಂಡಿತು.