ಕೊಡಗು, ಜು 15 (DaijiworldNews/DB): ನಾಲ್ಕು ವರ್ಷದ ಹಿಂದೆ ಮಳೆ, ಪ್ರವಾಹದಿಂದಾಗಿ ದೊಡ್ಡ ಮಟ್ಟದ ಸಂಕಷ್ಟ ಎದುರಿಸಿದ್ದ ಕೊಡಗಿನಲ್ಲಿ ಇದೀಗ ಧಾರಾಕಾರ ಮಳೆಯಿಂದಾಗಿ ಬೆಟ್ಟ ಕುಸಿತದ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ 80 ಕುಟುಂಬಗಳ 221 ಮಂದಿಯನ್ನು ವಾಸಸ್ಥಾನದಿಂದ ಸ್ಥಳಾಂತರಿಸಲಾಗಿದೆ.
ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟಗಳ ಬುಡದಲ್ಲಿ ವಾಸಿಸುತ್ತಿರುವ 80 ಕುಟುಂಬಗಳ 221 ಮಂದಿಯನ್ನು ಅವರ ವಾಸಸ್ಥಾನಗಳಿಂದ ತೆರವುಗೊಳಿಸಲಾಗಿದೆ. ಅಲ್ಲದೆ ಇಷ್ಟೂ ಮಂದಿಯನ್ನು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಆಶ್ರಯ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊಡಗಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾ ರಾಕಾರ ಮಳೆಯಿಂದಾಗಿ ಎರಡು ಬೆಟ್ಟಗಳು ಕುಸಿತದ ಆತಂಕ ಉಂಟಾಗಿದ್ದು, ಜನ ಭಯದಿಂದಲೇ ದಿನದೂಡುವಂತಾಗಿದೆ. ಅಯ್ಯಪ್ಪ ಬೆಟ್ಟ ಮತ್ತು ಮಲೆತಿರಿಕೆ ಬೆಟ್ಟ ಕುಸಿಯುವ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.