ಬೆಂಗಳೂರು, ಜು 15 (DaijiworldNews/DB): ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿಗೆ ನಡುಕ ಶುರುವಾಗಿದೆ. ಹೀಗಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮ ಮಾಡುವುದರಿಂದ ಯಾವುದೇ ತಪ್ಪಿಲ್ಲ. ವ್ಯಕ್ತಿ ಪೂಜೆ ಯಾರೂ ಮಾಡುತ್ತಿಲ್ಲ. ಅವರ ಹುಟ್ಟುಹಬ್ಬವನ್ನು ಕಾರ್ಯಕ್ರಮವಾಗಿ ಆಚರಿಸುತ್ತಿದ್ದೇವಷ್ಟೇ. ಡಿ.ಕೆ ಶಿವಕುಮಾರ್ ಅವರಿಗೆ 75 ವರ್ಷವಾದಾಗ ಅವರಿಗೂ ಅಮೃತ ಮಹೋತ್ಸವ ಆಚರಿಸೋಣ, ನನಗೂ, ಇತರ ನಾಯಕರಿಗೂ ಮಾಡೋಣ. ಇದರಲ್ಲಿ ಏನು ತಪ್ಪು ಬಂತು? ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ಚಿಂತನ ಮಂಥನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರವಾಹದ ಬಗ್ಗೆ ಚಿಂತನ ಮಂಥನ ಮಾಡುವುದು ಬಿಟ್ಟು ಪಕ್ಷದ ವಿಚಾರದಲ್ಲಿ ಮಾಡಲು ಹೊರಟಿದ್ದಾರೆ. ಈಗಾಗಲೇ ಆಂತರಿಕ ಸಮೀಕ್ಷೆ ಫಲಿತಾಂಶದಲ್ಲೇ ಅವರಿಗೆ ಎಷ್ಟು ಸ್ಥಾನ ಬರಬಹುದೆಂದು ಗೊತ್ತಾಗಿ ಆತಂಕಕ್ಕೊಳಗಾಗಿದ್ದಾರೆ. ಅವರಿಗೆ ಜನರ ಸಮಸ್ಯೆಗಿಂತ ಪಕ್ಷದ ಸೋಲು-ಗೆಲುವಿನ ಲೆಕ್ಕಾಚಾರವೇ ಮುಖ್ಯವಾಗಿದೆ ಎಂದು ಟೀಕಿಸಿದರು.
ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಯತ್ನಿಸುವುದು ಬಿಟ್ಟು ಚಿಂತನ ಮಂಥನ ಮಾಡಿಕೊಂಡು ಕೂರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಕಳೆದ ಬಾರಿಯ ಪ್ರವಾಹಕ್ಕೆ ಇನ್ನೂ ಯಾವುದೇ ಪರಿಹಾರ ಕೈಗೊಂಡಿಲ್ಲ ಎಂದರು.
ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂದು ಸರ್ಕಾರವೇ ನಿರ್ಧಾರಕ್ಕೆ ಬರುವ ಬದಲು ತಜ್ಞರಲ್ಲಿ ಚರ್ಚಿಸಿ ಅಭಿಪ್ರಾಯ ಪಡೆದುಕೊಳ್ಳಬೇಕು. ಹಾಲು, ಮೊಟ್ಟೆ ನೀಡಬಾರದೆಂಬುದು ಅವೈಜ್ಞಾನಿಕ. ಮನಸ್ಸಿಗೆ ತೋಚಿದಂತೆ ವರದಿ ಜಾರಿಗೊಳಿಸಿದರೆ ಇನ್ನೊಂದು ಚಕ್ರತೀರ್ಥ ಕತೆಯಾಗುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.